ನೇಪಾಳದ Gen Z ದಂಗೆಯ ಬಳಿಕ ಪ್ರಧಾನಿ ಗದ್ದುಗೆಯೇರಲಿರುವ ಬಲೇಂದ್ರ ಶಾಗೆ ಇದೆ ಬೆಂಗಳೂರು ನಂಟು
ಬಲೇಂದ್ರ ಶಾ | Photo Credit : PTI
ನೇಪಾಳ ಚುನಾವಣೆಯಲ್ಲಿ ಬಲೇಂದ್ರ ‘ಬಲೇನ್’ ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ರ‍್ಯಾಪರ್ ಆಗಿದ್ದ ಬಲೇನ್ ಶಾ ರಾಜಕಾರಣಕ್ಕೆ ಪ್ರವೇಶಿಸಿ ಮೇಯರ್ ಆಗಿದ್ದರು. ಇದೀಗ ಅವರು ನೇಪಾಳದ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ. ಕಳೆದ ವರ್ಷ ರಾಷ್ಟ್ರಾದ್ಯಂತ ನಡೆದ Gen Z ದಂಗೆಯ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದ್ದು, ಶಾ ಅವರ ಪಕ್ಷವನ್ನು Gen Z ಬೆಂಬಲಿತ ಪಕ್ಷವೆಂದು ವ್ಯಾಪಕವಾಗಿ ನೋಡಲಾಗುತ್ತಿದೆ.
ಬಲೇಂದ್ರ ಶಾ ಅವರು ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಝಾಪಾ ಕ್ಷೇತ್ರದಲ್ಲಿ ಸೋಲಿಸಿದ್ದು, RSP ರಾಷ್ಟ್ರೀಯ ಮಟ್ಟದಲ್ಲಿಯೂ ಭರ್ಜರಿ ಗೆಲುವಿನತ್ತ ಸಾಗುತ್ತಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ತೋರಿಸಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಬಲ ಉಪಸ್ಥಿತಿಯನ್ನು ಹೊಂದಿದ್ದ ಮಾಜಿ ರ‍್ಯಾಪರ್ ಶಾ, ಡಿಜಿಟಲ್ ಸಂಪರ್ಕ, ಆಡಳಿತ ವಿರೋಧಿ ಸಂದೇಶ ಮತ್ತು ಸಾಂಪ್ರದಾಯಿಕ ರಾಜಕೀಯ ಗಣ್ಯರ ವಿರುದ್ಧದ ಕಟು ಟೀಕೆಗಳ ಮೂಲಕ ಯುವ ನಗರ ಮತದಾರರ ಬೆಂಬಲ ಗಳಿಸಿದ್ದರು. ‘ಬಲೇನ್’ ಎಂದೇ ಜನಪ್ರಿಯವಾಗಿರುವ 35 ವರ್ಷ ವಯಸ್ಸಿನ ಬಲೇಂದ್ರ ಶಾ ಮೇ 2022 ರಿಂದ 2026 ಜನವರಿವರೆಗೆ ಕಠ್ಮಂಡುವಿನ 15ನೇ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು.
ಬಲೇಂದ್ರ ಶಾ ಯಾರು?
1990ರಲ್ಲಿ ಕಠ್ಮಂಡುವಿನಲ್ಲಿ ಜನಿಸಿದ ಬಲೇಂದ್ರ ಶಾ, ಭಾರತದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸುವ ಮೊದಲು ನೇಪಾಳದಲ್ಲಿ ಸಿವಿಲ್ ಎಂಜಿನಿಯರಿಂಗ್ ಓದಿದ್ದರು. ತಮ್ಮ ರಾಜಕೀಯ ವೃತ್ತಿಜೀವನಕ್ಕೆ ಮುಂಚಿತವಾಗಿ ಅವರು ನೇಪಾಳದ ಹಿಪ್-ಹಾಪ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಭ್ರಷ್ಟಾಚಾರ ಮತ್ತು ಸಾಮಾಜಿಕ ಅಸಮಾನತೆಯಂತಹ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಸಂಗೀತವನ್ನು ಬಳಸುತ್ತಿದ್ದರು.
ಬಲೇನ್ ಹಲವಾರು ಹಾಡುಗಳನ್ನು ಬರೆದಿದ್ದಾರೆ. ತ್ಯಾಗ ಎಂದರ್ಥವಿರುವ ನೇಪಾಳಿ ಭಾಷೆಯ “ಬಲಿದಾನ್” ಹಾಡು ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ಇದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತದೆ. ಈ ಹಾಡಿನಲ್ಲಿನ ಒಂದು ಸಾಲು ಹೀಗಿದೆ:
“ಸರ್ಕಾರವೇ, ನನ್ನ ಮಾತು ಕೇಳಿ – ಮಾತನಾಡುವುದು ಅಪರಾಧವಲ್ಲ. ಸತ್ಯ ಹೇಳಲು ನಾನು ಹೆದರುವುದಿಲ್ಲ. ದನಿಯೆತ್ತಿದ್ದಕ್ಕಾಗಿ ನನಗೆ ನಿಜವಾಗಿಯೂ ಕಾನೂನಿನಿಂದ ಶಿಕ್ಷೆಯಾಗುತ್ತದೆಯೇ?”
ಬಲೇನ್ ಮೊದಲು ಹೆಸರು ಮಾಡಿದ್ದು 2013ರಲ್ಲಿ. ಅದು ರಾಜಕೀಯದಲ್ಲಿ ಅಲ್ಲ, ರ‍್ಯಾಪ್ ಜಗತ್ತಿನಲ್ಲಿ. ಅವರು ನೇಪಾಳದಲ್ಲಿ ‘ರಾ ಬಾರ್ಜ್’ ಎಂದು ಕರೆಯಲ್ಪಡುವ ಜನಪ್ರಿಯ ರ‍್ಯಾಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದರು.
ಶಾ ಪಕ್ಷೇತರ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶಿಸಿದರು. 2022ರ ಕಠ್ಮಂಡು ಮೇಯರ್ ಚುನಾವಣೆಯಲ್ಲಿ 61,000 ಕ್ಕೂ ಹೆಚ್ಚು ಮತಗಳಿಂದ ಗೆದ್ದು, ಸ್ಥಾಪಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿದರು.
2018ರಲ್ಲಿ ಲೇಖಕಿ ಸಬೀನಾ ಕಫ್ಲೆ ಅವರನ್ನು ವಿವಾಹವಾದ ಬಲೇನ್ ಅವರಿಗೆ ಒಬ್ಬಳು ಮಗಳಿದ್ದಾಳೆ.
ಬಲೇನ್‌ಗೆ ಬೆಂಗಳೂರು ನಂಟು
ನೇಪಾಳದ ಪ್ರಧಾನಿ ಗದ್ದುಗೆಯೇರಲಿರುವ ಬಲೇನ್ ಅವರಿಗೆ ಬೆಂಗಳೂರಿನೊಂದಿಗೆ ನಂಟು ಇದೆ. 2016 ರಿಂದ 2018ರ ನಡುವೆ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMIT) ನಲ್ಲಿ MTech ವಿದ್ಯಾರ್ಥಿಯಾಗಿದ್ದರು. ಸ್ಟ್ರಕ್ಚರಲ್ ಎಂಜಿನಿಯರಿಂಗ್ ಕೋರ್ಸ್‌ನ ಮೊದಲ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದರು.
YouTube ನಲ್ಲಿ ಅವರ ಜನಪ್ರಿಯತೆಯಿಂದಾಗಿ ಅವರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಲ್ಲಿ ರ‍್ಯಾಪರ್ ಆಗಿ ಪರಿಚಿತರಾಗಿದ್ದರು. ಆದರೆ ಬೆಂಗಳೂರಿನಲ್ಲಿರುವ ಅವರ ಶಿಕ್ಷಕರು, ಬಲೇನ್ ಕಠ್ಮಂಡುವಿನ ಮೇಯರ್ ಆಗುವ ಮೊದಲು ಅವರ ರಾಜಕೀಯ ಆಕಾಂಕ್ಷೆಗಳ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, NMIT ಪ್ರೊಫೆಸರ್ ಭಾರತಿ ಗಣೇಶ್ ಅವರು ತಮ್ಮ ವಿದ್ಯಾರ್ಥಿಯಾಗಿದ್ದ ಶಾ ಅವರನ್ನು ಶ್ರದ್ಧೆಯಿಂದ ಕಲಿಯುವ ವಿದ್ಯಾರ್ಥಿ ಹಾಗೂ ಪ್ರಸಿದ್ಧ ರ‍್ಯಾಪರ್ ಎಂದು ನೆನಪಿಸಿಕೊಂಡರು.
ತಾನು ಕಲಿಸಿದ ಅನೇಕ ನೇಪಾಳಿ ವಿದ್ಯಾರ್ಥಿಗಳು ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದು, ಬಲೇನ್ ರ‍್ಯಾಪರ್ ಆಗಿದ್ದರು. “ನಾವು ಅವರ ಶೋಗಳ YouTube ವಿಡಿಯೊಗಳನ್ನು ನೋಡುತ್ತಿದ್ದೆವು,” ಎಂದಿದ್ದಾರೆ.
ಬೆಂಗಳೂರಿನಲ್ಲಿ ಅವರ ರ‍್ಯಾಪ್ ಸಂಗೀತವು ಗೆಳೆಯರಲ್ಲಿ ಜನಪ್ರಿಯವಾಗಿದ್ದರೂ, ಅದು ನೀಡುವ ಸಾಮಾಜಿಕ ಸಂದೇಶಗಳ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಅವರು ತರಗತಿಗಳನ್ನು ತಪ್ಪಿಸುತ್ತಿರಲಿಲ್ಲ. ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರವೂ ಅವರು ನನಗೆ ಮತ್ತು ಇತರ ಅಧ್ಯಾಪಕರಿಗೆ ಸಂದೇಶ ಕಳುಹಿಸುತ್ತಿದ್ದರು.
2022ರಲ್ಲಿ ಅವರು ನೇಪಾಳದ ಕಠ್ಮಂಡು ಮೆಟ್ರೋಪಾಲಿಟನ್ ನಗರದ ಮೇಯರ್ ಆಗಿ ಆಯ್ಕೆಯಾದಾಗ ಅವರನ್ನು ಅಭಿನಂದಿಸಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅದರ ನಂತರ ನಾನು ಅವರನ್ನು ‘ಮೇಯರ್ ಸಾಬ್’ ಎಂದು ತಮಾಷೆಯಾಗಿ ಕರೆದಿದ್ದೇನೆ ಎಂದು ಭಾರತಿ ಗಣೇಶ್ ಹೇಳಿದ್ದಾರೆ.
ಈಗ ಎನ್‌ಎಂಐಟಿಯಲ್ಲಿ ಉಪ ನೋಂದಣಿ ಅಧಿಕಾರಿಯಾಗಿರುವ ಶ್ರೇಯಸ್ ಹೇಳುವಂತೆ, ಬಲೇನ್ ಕಾಲೇಜು ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ಅವರಿಗಿಬ್ಬರು ಸ್ನೇಹಿತರಿದ್ದರು. ಅವರಲ್ಲಿ ಒಬ್ಬರು ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಇತರ ಇಬ್ಬರು ನೇಪಾಳಿ ವಿದ್ಯಾರ್ಥಿಗಳ ಹೆಸರು ಪ್ರವೀಣ್ ಶ್ರೇಷ್ಠ ಮತ್ತು ಸುನಿಲ್ ಲನ್ಸಾಲ್.
ಅವರು ಮೂವರೂ ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಅವರು ನಿಯಮಿತವಾಗಿ ತರಗತಿಗಳಿಗೆ ಹಾಜರಾಗುತ್ತಿದ್ದು, ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿದರು. ನನಗೆ ನೆನಪಿರುವಂತೆ ಅವರು ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದರು ಎಂದು ಶ್ರೇಯಸ್ ತಿಳಿಸಿದ್ದಾರೆ.
ಕಠ್ಮಂಡುವಿನ ಮೇಯರ್
2022ರಲ್ಲಿ ಬಲೇನ್ ಅವರು ಕಠ್ಮಂಡು ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಪ್ರಮುಖ ರಾಜಕೀಯ ಪಕ್ಷಗಳಾದ ನೇಪಾಳಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (UML) ಅಭ್ಯರ್ಥಿಗಳನ್ನು ಪರಾಭವಗೊಳಿಸಿದರು.
ಮೇಯರ್ ಆಗಿ ಬಲೇನ್ ನೇಪಾಳದ ರಾಜಧಾನಿಯನ್ನು ಸ್ವಚ್ಛಗೊಳಿಸುವತ್ತ ಕೆಲಸ ಮಾಡಿದರು. ತ್ಯಾಜ್ಯವನ್ನು ಎಲ್ಲಿ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಸರ್ಕಾರದೊಂದಿಗೆ ಜಗಳ ನಡೆಯುತ್ತಿರುವಾಗ, ಪ್ರಧಾನಮಂತ್ರಿ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳಿಂದ ಕಸ ಸಂಗ್ರಹಿಸುವುದನ್ನು ನಿಲ್ಲಿಸುವಂತೆ ಅವರು ಆದೇಶಿಸಿದ್ದರು.
ಬಲೇನ್‌ಗೆ Gen Z ಬೆಂಬಲ
ಕಪ್ಪು ಜಾಕೆಟ್, ಪ್ಯಾಂಟ್ ಮತ್ತು ಕಪ್ಪು ಕನ್ನಡಕ ಧರಿಸಿ ಕೂಲ್ ಆಗಿ ಕಾಣಿಸಿಕೊಳ್ಳುವ ಬಲೇನ್ ಮೇಯರ್ ಹುದ್ದೆಯನ್ನು ತ್ಯಜಿಸಿ ರಾಷ್ಟ್ರೀಯ ಸ್ವತಂತ್ರ ಪಕ್ಷವನ್ನು ಸೇರಿದರು. ಪ್ರಚಾರದ ಆರಂಭದಿಂದಲೇ ಅವರು ನೇಪಾಳದ Gen Z ಬೆಂಬಲವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅವರ ಸಂವಾದದ ಶೈಲಿಯು ಯುವಕರನ್ನು ಆಕರ್ಷಿಸಿತು. ಚುನಾವಣೆಗೂ ಮುಂಚೆಯೇ ಬಲೇನ್ ಅವರಿಗೆ ನೇಪಾಳದ ಯುವಕರ ಬೆಂಬಲವಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದು ಕೆಪಿ ಶರ್ಮಾ ಓಲಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಕಾರಣವಾಯಿತು. ಆಗ Gen Zಗಳಲ್ಲಿ ಅನೇಕರು 35 ವರ್ಷ ವಯಸ್ಸಿನ ಬಲೇನ್ ರಾಷ್ಟ್ರವನ್ನು ಮುನ್ನಡೆಸುವಂತೆ ಕರೆ ನೀಡಿದರು.
ತಮ್ಮ ಪ್ರಚಾರದಲ್ಲಿ ಬಲೇನ್ ಬಡವರಿಗೆ ಉತ್ತಮ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣವನ್ನು ಒದಗಿಸುವುದಾಗಿ ಹಾಗೂ ಉದ್ಯಮಿಗಳಿಗೆ ವ್ಯಾಪಾರದ ವಾತಾವರಣವನ್ನು ಸುಧಾರಿಸುವುದಾಗಿ ಭರವಸೆ ನೀಡಿದ್ದಾರೆ.
ವಿವಾದಗಳು
ಜನಪ್ರಿಯತೆಯ ಹೊರತಾಗಿಯೂ ಬಲೇನ್ ವಿವಾದಗಳಿಂದ ಹೊರತಾಗಿಲ್ಲ. ದೇಶವು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ ನೇಪಾಳದ ರೂ. 40 ಮಿಲಿಯನ್ ಮೌಲ್ಯದ ದುಬಾರಿ ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಅವರು ಪ್ರಚಾರ ಮಾಡಿದ್ದು ಟೀಕೆಗೆ ಗುರಿಯಾಯಿತು.
2023ರಲ್ಲಿ ಭಾರತದ “ಅಖಂಡ ಭಾರತ” ಭಿತ್ತಿಚಿತ್ರಕ್ಕೆ ಪ್ರತಿಕ್ರಿಯೆಯಾಗಿ ಶಾ ತಮ್ಮ ಕಚೇರಿಯಲ್ಲಿ “ಗ್ರೇಟರ್ ನೇಪಾಳ” ನಕ್ಷೆಯನ್ನು ನೇತುಹಾಕಿದರು. ಇದರಲ್ಲಿ ಒಂದು ಕಾಲದಲ್ಲಿ ನೇಪಾಳಕ್ಕೆ ಸೇರಿದ್ದ, ಆದರೆ ಈಗ ಭಾರತದ ಗಡಿಯೊಳಗೆ ಇರುವ ಪ್ರದೇಶಗಳು ಸೇರಿವೆ. ಅವರ ಈ ನಡೆ ಭಾರತದಿಂದ ಟೀಕೆಗೆ ಗುರಿಯಾಯಿತು.
ಬೀದಿ ವ್ಯಾಪಾರಿಗಳು ಮತ್ತು ನಗರ ಕೊಳೆಗೇರಿ ನಿವಾಸಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರನ್ನು ಬಳಸಿದ್ದಕ್ಕಾಗಿ ಮಾನವ ಹಕ್ಕುಗಳ ಸಂಘಟನೆಗಳಿಂದಲೂ ಬಲೇನ್ ಟೀಕೆಗಳನ್ನು ಎದುರಿಸಿದ್ದರು.