ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ದೋಷಪೂರಿತ ಸ್ಮಾರ್ಟ್ ಸಿಟಿ ಯೋಜನೆ: ಅಬ್ದುಲ್ ರವೂಫ್ ಆರೋಪ

Update: 2021-01-01 08:39 GMT

ಮಂಗಳೂರು, ಜ.1: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ದೋಷ ಪೂರಿತ ಕಾಮಗಾರಿಗಳಿಂದ ಕೂಡಿದ್ದು, ಸಾರ್ವಜನಿಕ ಹಣದ ದುರುಪಯೋಗವಾಗುತ್ತಿದೆ ಎಂದು ಮಹಾನಗರ ಪಾಲಿಕೆಯ ವಿಪಕ್ಷದ ಮುಖ್ಯ ಸಚೇತಕ ಅಬ್ದುಲ್ ರವೂಫ್ ಆರೋಪಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆಯ ರಥಬೀದಿಯ ಬಳಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆ ನಿರ್ಮಾಣವಾದ ಎರಡು ತಿಂಗಳ ಒಳಗೆ ಬಿರುಕು ಬಿಟ್ಟಿದೆ. ಕೆಲವು ಕಡೆ ಬಿರುಕು ಬಿಟ್ಟ ಕಾಂಕ್ರಿಟ್ ರಸ್ತೆಗಳಿಗೆ ತೇಪೆ ಹಾಕಲಾಗಿದೆ. ಕಾಮಗಾರಿಗಳ ಗುತ್ತಿಗೆ ನೀಡುವ ಸಂದರ್ಭದಲ್ಲೂ ಹಲವು ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದರು.

ಒಂದೂವರೆ ಕೋಟಿ ರೂ.ನ ಕಾಮಗಾರಿ ವ್ಯರ್ಥ:

ಮಂಗಳೂರು ಸೆಂಟ್ರಲ್ ಮಾರುಕಟ್ಟೆ ಯ ವ್ಯಾಪಾರಿಗಳಿಗೆ  ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪುರಭವನದ ಬಳಿಯ ನೆಹರು ಮೈದಾನದಲ್ಲಿ ಮಾರುಕಟ್ಟೆ ನಿರ್ಮಿಸಲು ಸುಮಾರು ಒಂದೂವರೆ ಕೋಟಿ ರೂ. ವ್ಯಯ ಮಾಡಲಾಗಿದೆ. ಆದರೆ ಈ ಮೈದಾನವನ್ನು ಫುಟ್ಬಾಲ್ ಮೈದಾನವಾಗಿ ಉಳಿಸಿಕೊಳ್ಳಬೇಕು, ಬೇರೆ ಉದ್ದೇಶಕ್ಕೆ ಬಳಸಬಾರದು ಎಂದು ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ. ಇದರಿಂದ ಕೋಟ್ಯಂತರ ರೂ. ಸಾರ್ವಜನಿಕ ಹಣ ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ಪೋಲಾದಂತಾಗಿದೆ. ನಗರದ ವಿವಿಧ ಕಡೆ ನಡೆಯುತ್ತಿರುವ ಕಾಮಗಾರಿಗಳೂ ಸಮರ್ಪಕವಾಗಿಲ್ಲ ಎಂದು ಅಬ್ದುಲ್ ರವೂಫ್ ದೂರಿದರು.

*ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತ:

ಮಂಗಳೂರು ನಗರದ ಕೆಲವೆಡೆ  ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತಗೊಂಡಿದೆ. ನಗರದ ಕೇಂದ್ರ ಸ್ಥಾನದಲ್ಲಿ ರುವ ವೆನ್ಲಾಕ್ ಆಸ್ಪತ್ರೆಯ ಬಳಿಯ ಕಾಮಗಾರಿಗಳು ಸ್ಥಗಿತಗೊಂಡಿರುವುದರಿಂದ ತುರ್ತು ಚಕಿತ್ಸೆಗೆ ಆಸ್ಪತ್ರೆಗೆ ಬರುವವರಿಗೂ ಸಮಸ್ಯೆ ಉಂಟಾಗುತ್ತಿದೆ. ಕೋಟ್ಯಂತರ ರೂ. ಮೊತ್ತವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ವ್ಯಯ ಮಾಡುತ್ತಿರುವ ಸಂದರ್ಭದಲ್ಲಿ ನಿಯಮ ಗಳನ್ನು ಉಲ್ಲಂಘನೆ ಮಾಡುತ್ತಿರುವುದು ಈ ರೀತಿ ಸಾರ್ವಜನಿಕ ಹಣದ ದುರುಪಯೋಗ ಆಗುವುದಕ್ಕೆ ಕಾರಣವಾಗಿದೆ ಎಂದು ಅಬ್ದುಲ್ ರವೂಫ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ಭಾಸ್ಕರ ಕೆ., ಲ್ಯಾನ್ಸ್ ಲೋಟ್ ಪಿಂಟೋ, ನವೀನ್ ಡಿಸೋಜ, ಲತೀಫ್ ಕಂದಕ್, ಅಶ್ರಫ್ ಬಜಾಲ್, ಕೇಶವ ಮರೋಳಿ, ಝೀನತ್ ಸಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News