×
Ad

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನವೀನ ಪ್ರಾಜೆಕ್ಟ್‌ಗಳಿಗೆ ಸರಕಾರದಿಂದ 27.45 ಲಕ್ಷ ರೂ. ಅನುದಾನ

Update: 2021-01-02 12:22 IST

ಮಂಗಳೂರು, ಜ.2: ನಗರದ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) ನವೀನ ಹಾಗೂ ಸೃಜನಶೀಲ ಪ್ರಾಜೆಕ್ಟ್‌ಗಳಿಗಾಗಿ ರಾಜ್ಯ ಸರಕಾರ ಒಟ್ಟು 27.45 ಲಕ್ಷ ರೂ. ಅನುದಾನ ಒದಗಿಸಿದೆ.

ಎಸ್‌ಜೆಇಸಿ ಪ್ರಾಜೆಕ್ಟ್‌ಗಳಿಗೆ ಸರಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ (ಐಟಿ), ಬಯೋ-ಟೆಕ್ನಾಲಜಿ (ಬಿಟಿ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್ & ಟಿ) ವಿಭಾಗಗಳ ಕೆಳಗೆ ಬರುವ ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕಿನಿಂದ (ಎನ್‌ಎಐಎನ್) ಒಟ್ಟು 27.45 ಲಕ್ಷ ರೂ. ಮೊತ್ತದ ಅನುದಾನ ದೊರೆತಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.

 ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕಿಟ್ಸ್)ನ ಸ್ಕಿಲ್ಲಿಂಗ್ ಪ್ರೋಗ್ರಾಂಗಳ ಮುಖ್ಯಸ್ಥೆ ಡಾ. ಸಂಧ್ಯಾ ಅನ್ವೆಕರ್ ಇತ್ತೀಚೆಗೆ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಒದಗಿಸಿದ ಇನ್ಕ್ಯುಬೇಷನ್ ಸೆಂಟರ್ ಸೌಲಭ್ಯಗಳನ್ನು ಪರಿಶೀಲಿಸಿದರು. ಸಾಮಾಜಿಕ ಪ್ರಸ್ತುತತೆಯನ್ನು ಹೊಂದಿರುವ ನವೀನ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ವಿದ್ಯಾರ್ಥಿ ಸಮುದಾಯಕ್ಕೆ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿದಕ್ಕಾಗಿ ಈ ಸಂದರ್ಭದಲ್ಲಿ ಅವರು ಕಾಲೇಜನ್ನು ಶ್ಲಾಘಿಸಿದರು.

ಕಾಲೇಜಿನ ನಿರ್ದೇಶಕ ವಂ ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಉಪ ನಿರ್ದೇಶಕ ವಂ.ರೋಹಿತ್ ಡಿಕೋಸ್ತ, ಪ್ರಾಂಶುಪಾಲೆ ಡಾ.ರಿಯೊ ಡಿಸೋಜ, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ, ಕಾಲೇಜು ಸಂಯೋಜಕ ಡಾ.ಪುರುಷೋತ್ತಮ ಚಿಪ್ಪಾರ್, ಜಿಲ್ಲಾ ಇನ್ನೋವೇಶನ್ ಅಸೋಸಿಯೇಟ್ ಯತೀಶ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಳೀಯ ಸಮುದಾಯದ ಅಗತ್ಯತೆಗಳನ್ನು ಪೂರೈಸಲು ಮತ್ತು ಕ್ಯಾಂಪಸ್‌ನಲ್ಲಿ ಸ್ಟಾರ್ಟ್ ಅಪ್ ವ್ಯವಸ್ಥೆಯನ್ನು ಬಲಪಡಿಸಲು ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್ (ಎನ್‌ಎಐಎನ್)ನ ಅನುದಾನಕ್ಕಾಗಿ ಆಯ್ಕೆ ಮಾಡಲಾಗಿತ್ತು. ಪ್ರಾರಂಭದಿಂದಲೂ ಕಾಲೇಜಿನ ಇನ್ಕ್ಯುಬೇಷನ್ ಕೇಂದ್ರವು ನಾವೀನ್ಯತೆ-ಸಂಬಂಧಿತ ಚಟುವಟಿಕೆಗಳನ್ನು ವಿವಿಧ ರೀತಿಯಲ್ಲಿ ಬೆಂಬಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕಾಲೇಜು ಎನ್‌ಎಐಎನ್ ನಿಧಿಯ ಅನುದಾನದ ಬೆಂಬಲಕ್ಕಾಗಿ 15  ಪ್ರಾಜೆಕ್ಟ್‌ಗಳನ್ನು ಸಲ್ಲಿಸಿತ್ತು ಮತ್ತು ಅವುಗಳಲ್ಲಿ 10 ಪ್ರಾಜೆಕ್ಟ್‌ಗಳಿಗೆ ಒಟ್ಟು 27.45 ಲಕ್ಷ ರೂ. ಮೊತ್ತದ ಅನುದಾನ ದೊರೆತಿದೆ. ಕಂಪ್ಯೂಟಿಂಗ್ ಸಾಧನಗಳು, ಹೈಸ್ಪೀಡ್ ಇಂಟರ್ನೆಟ್, ಎಲೆಕ್ಟ್ರಾನಿಕ್ ಉಪಕರಣಗಳು, 3ಡಿ ಪ್ರಿಂಟಿಂಗ್ ಮೆಷಿನ್ ಮತ್ತು ಲೇಸರ್ ಕಟ್ಟಿಂಗ್ ಮೆಷಿನ್ ಇತ್ಯಾದಿಗಳಿಂದ ಹಿಡಿದು ಈ ನವೀನ ಪ್ರಾಜೆಕ್ಟ್‌ಗಳನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಮತ್ತು ಯಂತ್ರೋಪಕರಣಗಳನ್ನು ಕಾಲೇಜಿನಲ್ಲಿರುವ ಎನ್‌ಎಐಎನ್ ಇನ್ಕ್ಯುಬೇಷನ್ ಕೇಂದ್ರವು ಹೊಂದಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News