ಗಣರಾಜ್ಯೋತ್ಸವದ ದಿನದಂದು ಟ್ರಾಕ್ಟರ್ ರ‍್ಯಾಲಿ ನಡೆಸುತ್ತೇವೆ: ರೈತರ ಎಚ್ಚರಿಕೆ
ಚಂಡೀಗಢ, ಜ.2: ಕೇಂದ್ರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ತಮ್ಮ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ತಾವು ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ರಾಷ್ಟ್ರಧ್ವಜದಿಂದ ಆಲಂಕೃತವಾದ ಟ್ರಾಕ್ಟರ್ ಮತ್ತಿತರ ವಾಹನಗಳೊಂದಿಗೆ ದಿಲ್ಲಿಗೆ ಪರೇಡ್ ನಡೆಸುವುದಾಗಿ ರೈತರು ಶನಿವಾರ ಕೇಂದ್ರ ಸರಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದ ಏಳು ಮಂದಿ ಸದಸ್ಯರ ಸಮನ್ವಯ ಸಮಿತಿಯು ಈ ಘೋಷಣೆಯನ್ನು ಮಾಡಿದೆ. ಭಾರತೀಯ ಕಿಸಾನ್ ಯೂನಿಯನ್‌ನ ಪಂಜಾಬ್ (ರಾಜೇವಾಲ್ ಬಣ) ಘಟಕದ ಅಧ್ಯಕ್ಷ ಬಲಬೀರ್ ಸಿಂಗ್ ರಾಜೇವಾಲ್ ಹಾಗೂ ಕ್ರಾಂತಿಕಾರಿ ಕಿಸಾನ್ ಯೂನಿಯನ್‌ನ ಅಧ್ಯಕ್ಷ ದರ್ಶನ್‌ಪಾಲ್ ಹೊಸದಿಲ್ಲಿಯಲ್ಲಿ ಪತ್ರಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು. ‘‘ಜನವರಿ 26ರಂದು ರಾಷ್ಟ್ರ ರಾಜಧಾನಿಯ ಗಡಿಗಳಿಂದ ದಿಲ್ಲಿ ಟ್ರಾಕ್ಟರ್ ಟ್ರಾಲಿ ಪರೇಡ್ ನಡೆಸುವಂತೆ ನಾವು ಕರೆ ನೀಡಿದ್ದೇವೆ. ಈ ರಾಷ್ಟ್ರಧ್ವಜ ಸಹಿತವಾಗಿ ನಡೆಯಲಿರುವ ಈ ಟ್ರಾಕ್ಟರ್ ಪರೇಡ್‌ನ್ನು, ‘ರೈತರ ಗಣರಾಜ್ಯ ಪರೇಡ್’ ಎಂದು ಕರೆಯಲಾಗುವುದು ಹಾಗೂ ಅಧಿಕೃತ ಗಣರಾಜ್ಯೋತ್ಸವ ಪರೇಡ್ ನಡೆದ ಬಳಿಕ ಈ ಪರೇಡ್ ನಡೆಯಲಿದೆ ಎಂದರು.
‘‘ಶಾಂತಿಯುತವಾಗಿ ಪ್ರತಿಭಟನೆ ನಡೆಸಲುನಾವು ಬಯಸಿದ್ದೇವೆ.ಒಂದೋ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ, ಇಲ್ಲವೇ ಬಲಪ್ರಯೋಗಿಸಿ ನಮ್ಮನ್ನು ದಿಲ್ಲಿಯಿಂದ ಹೊರದಬ್ಬಿ ಎಂಬ ಎರಡು ಆಯ್ಕೆಗಳನ್ನು ನಾವು ಕೇಂದ್ರ ಸರಕಾರದ ಮುಂದಿರಿಸಿದ್ದೇವೆ. ಈ ಬಗ್ಗೆ ನಿರ್ಣಾಯಕ ಕ್ರಮವನ್ನು ಕೈಗೊಳ್ಳುವ ಕಾಲ ಸನ್ನಿಹಿತವಾಗಿದೆ.ಯಾಕೆಂದರೆ ಗಣರಾಜ್ಯ ದಿನವು ಪ್ರಜೆಗಳ ಪರಮಾಧಿಕಾರವನ್ನು ಪ್ರತಿನಿಧಿಸುತ್ತದೆ.ಪ್ರತಿಕೂಲ ವಾತಾವರಣದಲ್ಲೂ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪೂರ್ತಿ ಎರಡು ತಿಂಗಳುಗಳ ಕಾಲ ಶಾಂತಿಯುತವಾಗಿ ಹಾಗೂ ತಾಳ್ಮೆಯಿಂದ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸಿದ್ದೇವೆ’’ ಎಂದವರು ಹೇಳಿದರು.
ಮಕರಸಂಕ್ರಾಂತಿ ಅಥವಾ ಲೋಹ್ರಿ ಹಬ್ಬದಂದು ಈ ಮೂರು ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಡುವ ಮೂಲಕ ‘ಕಿಸಾನ್ ಸಂಕಲ್ಪ ದಿನ’ವನ್ನು ಆಚರಿಸಲಾಗುವುದು. ಚಳವಳಿಯಲ್ಲಿ ಮಹಿಳಾ ರೈತರ ಪಾತ್ರದ ಬಗ್ಗೆ ಗಮನಸೆಳೆಯಲು ಜನವರಿ 18ನ್ನು ‘ಮಹಿಳಾ ಕಿಸಾನ್ ದಿವಸ್ ಆಗಿ ಆಚರಿಸಲಾಗುವುದು. ಸುಭಾಶ್ ಚಂದ್ರ ಭೋಸ್ ಅವರ ಜನ್ಮದಿನವಾದ ಜನವರಿ 23ರಂದು ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿರುವ ರಾಜ್ಯಪಾಲರ ಅಧಿಕೃತ ನಿವಾಸಗಳ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಆಜಾದ್ ಕಿಸಾನ್ ದಿವಸ್ ಆಚರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರಕಾವು ತಮ್ಮ ಎರಡು ಸಣ್ಣ ಬೇಡಿಕೆಗಳನ್ನು ಮಾತ್ರ ಈಡೇರಿಸಲು ಒಪ್ಪಿಕೊಂಡಿದೆ ಎಂದು ರಾಜೇವಾಲ್ ತಿಳಿಸಿದರು. ರೈತರ ಸಂಘಟನೆಗಳು ಪರ್ಯಾಯ ಪ್ರಸ್ತಾವನೆಗಳೊಂದಿಗೆ ಮಾತುಕತೆಗೆ ಬರುವಂತೆ ಕೇಂದ್ರ ಸರಕಾರವು ಕೇಳಿಕೊಂಡಿತ್ತು. ಆದರೆ ನಾವು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದರ ಹೊರತಾಗಿ ಬೇರೆ ಪರ್ಯಾಯ ಮಾರ್ಗವಿಲ್ಲವೆಂದು ತಾವು ಸರಕಾರಕ್ಕೆ ಉತ್ತರಿಸಿದ್ದೇವೆಂದು ಅವರು ತಿಳಿಸಿದರು.
ಕನಿಷ್ಠ ಬೆಂಬಲ ದರದಲ್ಲಿ ಮಾರುವ ತಮ್ಮ ಕಾನೂನುಬದ್ಧ ಹಕ್ಕಿನ ಬಗ್ಗೆ ತಾತ್ವಿಕವಾಗಿ ಚರ್ಚೆ ನಡೆಸಲೂ ಕೇಂದ್ರ ಸರಕಾರ ತಯಾರಿಲ್ಲವೆಂದು ರೈತ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಯೋಗೇಂದ್ರ ಯಾದವ್ ಮಾತನಾಡಿ, ರೈತರ ಶೇಕಡ 50ರಷ್ಟು ಬೇಡಿಕೆಗಳನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದೆ ಎಂಬುವುದು ಅಪ್ಪಟ ಸುಳ್ಳು. ಈ ಬಗ್ಗೆ ಲಿಖಿತವಾಗಿ ಯಾವುದೇ ಭರವಸೆ ನಮಗೆ ದೊರೆತಿಲ್ಲ ಎಂದವರು ಹೇಳಿದರು.
ಜನವರಿ 26ರೊಳಗೆ ತಮ್ಮ ಬೇಡಿಕೆಗಳು ಈಡೇರದಿದಲ್ಲಿ ಶಾಂತಿಯುತವಾಗಿ ದಿಲ್ಲಿಯತ್ತ ರ್ಯಾಲಿಯನ್ನು ಆರಂಭಿಸುವುದರ ಹೊರತಾಗಿ ಬೇರೆ ಆಯ್ಕೆ ನಮಗೆ ಉಳಿದಿಲ್ಲ’’ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ತಿಳಿಸಿದ್ದಾರೆ. ಗುರ್ನಾಮ್ ಸಿಂಗ್ ಚೌಧುನಿ, ಅಶೋಕ್ ಧಾವಳೆ, ಜಗಜಿತ್ ಸಿಂಗ್ ದಾಲ್ಲೆವಾಲ್ ಹಾಗೂ ಅಭಿಮನ್ಯು ಕೊಹಾಡ್ ತಿಳಿಸಿದ್ದಾರೆ.