ಗಾಂಧೀಜಿಯಂತೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ: ಮೋಹನ್ ಭಾಗ್ವತ್
ಹೊಸದಿಲ್ಲಿ,ಜ.02: ಮಹಾತ್ಮಾ ಗಾಂಧೀಜಿಯಂತೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿಕೆ ನೀಡಿದ್ದಾರೆ. ಜೆ.ಕೆ ಬಜಾಜ್ ಮತ್ತು ಎಮ್.ಡಿ. ಶ್ರೀನಿವಾಸ್ ಬರೆದಿರುವ ʼಮೇಕಿಂಗ್ ಆಫ್ ಹಿಂದೂ ಪ್ಯಾಟ್ರಿಯಟ್, ಬ್ಯಾಕ್ ಗ್ರೌಂಡ್ ಆಫ್ ಗಾಂಧೀಜೀಸ್ ಹಿಂದ್ ಸ್ವರಾಜ್ʼ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಪುಸ್ತಕ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, "ಗಾಂಧೀಜಿಯ ವ್ಯಕ್ತಿತ್ವವನ್ನು ಸಂಘವು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವುದು ಸಾಧ್ಯವಿಲ್ಲದ ಮಾತು. ಗಾಂಧೀಜಿಯಂತಹಾ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾಗಿ ndtv.com ವರದಿ ಮಾಡಿದೆ.
"ಧರ್ಮ ಮತ್ತು ದೇಶಪ್ರೇಮ ಎರಡೂ ಬೇರೆಯಲ್ಲ, ಆಧ್ಯಾತ್ಮದಿಂದಲೇ ದೇಶಪ್ರೇಮ ಉದಯಿಸುತ್ತದೆ. ಗಾಂಧೀಜಿಯು "ದೇಶಪ್ರೇಮವು ಧರ್ಮದಿಂದಲೇ ಉದಯಿಸುತ್ತದೆ" ಎಂದು ಹೇಳಿದ್ದರು. ಯಾರಾದರೂ ತಾನು ಹಿಂದೂ ಎಂದು ಹೇಳಿಕೊಳ್ಳುವುದಾದರೆ ಅವರಿಗೆ ದೇಶಪ್ರೇಮದ ಗುಣವಿರಬೇಕು. ಅವರು ಯಾವತ್ತಿಗೂ ಭಾರತದ ವಿರೋಧಿಯಾಗಬಾರದು. ಈ ದೇಶದ ಜನರನ್ನು, ನದಿಗಳನ್ನು, ಸಂಸ್ಕೃತಿಯನ್ನು ಮತ್ತು ಸಂಪ್ರದಾಯಗಳನ್ನು ಗೌರವಿಸಬೇಕು ಕೇವಲ ಇಲಿನ ಮಣ್ಣನ್ನು ಮಾತ್ರ ಗೌರವಿಸಿದರೆ ಸಾಲದು ಎಂದು ಅವರು ಹೇಳಿಕೆ ನೀಡಿದ್ದಾರೆ.