"ಪ್ರತಿಭಟನೆಯ ಸ್ಥಳದಲ್ಲೇ ನನ್ನ ಅಂತ್ಯಕ್ರಿಯೆ ನಡೆಸಿ": ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೈದ ರೈತ
ನವದೆಹಲಿ, ಜ.2: ಉತ್ತರ ಪ್ರದೇಶದ ಗಾಝಿಯಾಬಾದ್‍ನಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಸ್ಥಳದಲ್ಲಿ 72 ವರ್ಷದ ರೈತರೊಬ್ಬರು ಶನಿವಾರ ಬೆಳಿಗ್ಗೆ ಆತ್ಮಹತ್ಯೆಗೈದಿದ್ದಾರೆ. ನವೆಂಬರ್ 28ರಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದರು.
ಪ್ರತಿಭಟನಾ ಸ್ಥಳದಲ್ಲಿರುವ ಸಂಚಾರಿ ಶೌಚಾಲಯಗಳ ಪೈಕಿ ಒಂದರಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಂಜಾಬಿ ಭಾಷೆಯಲ್ಲಿ ಬರೆಯಲಾದ ಸುಸೈಡ್ ನೋಟ್ ಕೂಡ ಪತ್ತೆಯಾಗಿದೆ,'' ಎಂದು ವೃತ್ತ ನಿರೀಕ್ಷಕ ಅನ್ಶು ಜೈನ್ ಹೇಳಿದ್ದಾರೆ. ಆತ್ಮಹತ್ಯೆಗೈದ ರೈತ ರಾಮಪುರ್ ಜಿಲ್ಲೆಯವರಾಗಿದ್ದಾರೆ. ``ರೈತರ ಸಮಿತಿ ಪೋಸ್ಟ್ ಮಾರ್ಟಂ ನಡೆಸದೇ ಇರಲು ತೀರ್ಮಾನಿಸಿದೆ. ಹೊರನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡು ಬಂದಿದ್ದು ಯಾರಿಗೂ ಅವರ ಸಾವಿನ ಕಾರಣ ಕುರಿತು ಯಾವುದೇ ಸಂಶಯವಿಲ್ಲ. ಆತ ಬರೆದಿದ್ದಾರೆಂದು ಹೇಳಲಾದ ಸುಸೈಡ್ ನೋಟ್ ಪರಿಶೀಲಿಸಲಾಗುವುದು,'' ಎಂದು ಅವರು ಹೇಳಿದ್ದಾರೆ.
ರೈತರ ಬೇಡಿಕೆಗಳನ್ನು ಈಡೇರಿಸದೇ ಇರುವ ಸರಕಾರವನ್ನು ಆತ್ಮಹತ್ಯೆಗೈದ ರೈತ ತಮ್ಮ ಸುಸೈಡ್ ನೋಟ್‍ನಲ್ಲಿ ದೂರಿದ್ದಾರೆಂದು ಭಾರತೀಯ ಕಿಸಾನ್ ಯೂನಿಯನ್‍ನ ರಾಷ್ಟ್ರೀಯ ಮಾಧ್ಯಮ ಸಂಘಟಕ ಸಂಶೇರ್ ರಾಣಾ ಹೇಳಿದ್ದಾರೆ. ``ಅವರ ಅಂತ್ಯಸಂಸ್ಕಾರವನ್ನು ಯುಪಿ-ಗೇಟ್‍ನಲ್ಲಿ (ಪ್ರತಿಭಟನಾ ಸ್ಥಳ) ನಡೆಸಬೇಕೆಂದೂ ಅವರು ಬರೆದಿದ್ದಾರೆ. ಆದರೆ ಅವರ ಮೃತದೇಹವನ್ನು ಅವರ ಹುಟ್ಟೂರಿಗೆ ಕಳುಹಿಸಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು,'' ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರವಷ್ಟೇ 57 ವರ್ಷದ ಉತ್ತರ ಪ್ರದೇಶದ ಭಾಗ್ಪತ್‍ನ ಒಬ್ಬ ರೈತ ಪ್ರತಿಭಟನಾ ಸ್ಥಳದಲ್ಲಿ ಸಾವನ್ನಪ್ಪಿದ್ದರು. ಅವರ ಕುಟುಂಬ ಪೋಸ್ಟ್ ಮಾರ್ಟಂಗೆ ಅನುಮತಿ ನಿರಾಕರಿಸಿದ್ದರಿಂದ ಅವರ ಸಾವಿನ ಕಾರಣ ಕುರಿತು ಸ್ಪಷ್ಟತೆಯಿಲ್ಲ. ಆತ ಉಸಿರಾಡಲು ಕಷ್ಟವಾಗುತ್ತಿದೆಯೆಂದು ಹೇಳಿ ನಂತರ ಮೃತಪಟ್ಟರು ಎಂದು ಅವರ ಸೋದರ ಹೇಳಿದ್ದಾರೆ.