ಧ್ವಂಸಗೊಳಿಸಿರುವ ಮಂದಿರವನ್ನು ಹಿಂದೂಗಳ ಬೆಂಬಲದೊಂದಿಗೆ ಅಲ್ಲೇ ನಿರ್ಮಿಸುತ್ತೇವೆಂದ ಪಾಕಿಸ್ತಾನ ಸರ್ಕಾರ

Update: 2021-01-02 10:19 GMT

ಪೇಶಾವರ,ಜ.02: ಪಾಕಿಸ್ತಾನದ ಖೈಬರ್ ಪಖ್ತೂಂಖ್ವ ಪ್ರಾಂತ್ಯದ  ತೆರ್ರಿ ಎಂಬ ಗ್ರಾಮದಲ್ಲಿ ಬುಧವಾರ  1,500ಕ್ಕೂ ಅಧಿಕ ಮಂದಿಯಿದ್ದ ಉದ್ರಿಕ್ತ ಗುಂಪೊಂದು ಧ್ವಂಸಗೈದು ಬೆಂಕಿ ಹಚ್ಚಿದ ಹಿಂದು ದೇವಸ್ಥಾನವನ್ನು ಸರಕಾರಿ ನಿಧಿ ಬಳಸಿ ಮರುನಿರ್ಮಿಸಲಾಗುವುದು ಎಂದು ಅಲ್ಲಿನ ಸಚಿವರು ಮಾಹಿತಿ ನೀಡಿದ್ದಾರೆ.

ದೇವಸ್ಥಾನಕ್ಕೆ ಹೊಂದಿಕೊಂಡಿದ್ದ ಕಟ್ಟಡದಲ್ಲಿ ನಡೆಯುತ್ತಿದ್ದ ನವೀಕರಣವನ್ನು ವಿರೋಧಿಸಿ ಈ ವಿಧ್ವಂಸಕ ಕೃತ್ಯವನ್ನು ಮುಸ್ಲಿಮರಿದ್ದ ತಂಡವೊಂದು ನಡೆಸಿತ್ತು.

"ದಾಳಿಯಿಂದ ಉಂಟಾದ ಹಾನಿಗೆ ನಾವು ವಿಷಾಧಿಸುತ್ತೇವೆ," ಎಂದು ಖೈಬರ್ ಪಖ್ತೂಂಖ್ವ ಪ್ರಾಂತ್ಯದ ಮಾಹಿತಿ ಸಚಿವ ಕಮ್ರನ್ ಬಂಗಷ್ ಹೇಳಿದ್ದಾರೆ.

"ಮುಖ್ಯಮಂತ್ರಿ ಈ ದೇವಸ್ಥಾನ ಹಾಗೂ ಅದಕ್ಕೆ ತಾಗಿಕೊಂಡಿರುವ ಮನೆಯ ಮರುನಿರ್ಮಾಣಕ್ಕೆ ಆದೇಶಿಸಿದ್ದಾರೆ, ನಿರ್ಮಾಣ ಕಾರ್ಯ ಆದಷ್ಟು ಬೇಗ ಹಿಂದು ಸಮುದಾಯದ ಬೆಂಬಲದೊಂದಿಗೆ ಆರಂಭಗೊಳ್ಳಲಿದೆ. ದೇವಳಕ್ಕೆ ರಕ್ಷಣೆಯನ್ನೂ ಒದಗಿಸಲಾಗುವುದು," ಎಂದು ಸಚಿವರು ತಿಳಿಸಿದ್ದಾರೆ.

ದೇವಳ ಧ್ವಂಸ ಪ್ರಕರಣ ಕುರಿತಂತೆ ವರದಿಯನ್ನೂ ಪಾಕಿಸ್ತಾನದ ಅತ್ಯುನ್ನತ ನ್ಯಾಯಾಲಯ ಕೇಳಿದೆ. ಈ ಪ್ರಕರಣ ಸಂಬಂಧ ಸ್ಥಳೀಯ ಧಾರ್ಮಿಕ ನಾಯಕ ಮೌಲಾನ ಶರೀಫ್ ಎಂಬಾತನ ಸಹಿತ 45 ಮಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೇಶಾವರದಿಂದ ಸುಮಾರು 160 ಕಿಮೀ ದೂರದಲ್ಲಿ ಈ ದೇವಸ್ಥಾನವಿದೆ. ಭಾರತದ ವಿಭಜನೆಯ ಮುನ್ನ ಹಿಂದು ಸಂತ ಶ್ರೀ ಪರಮಹಂಸ ಇಲ್ಲಿ ವಿಧಿವಿಶರಾಗಿದ್ದರೆಂದು ಹೇಳಲಾಗಿದ್ದು ಪಾಕಿಸ್ತಾನದಾದ್ಯಂತ ಭಕ್ತರು ಇಲ್ಲಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News