ಜ.14-16: ಬಿಕರ್ನಕಟ್ಟೆ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ
ಮಂಗಳೂರು, ಜ.2: ಬಿಕರ್ನಕಟ್ಟೆಯ ಬಾಲ ಯೇಸು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ 14ರಿಂದ 16ರವರೆಗೆ ನಡೆಯಲಿದೆ ಎಂದು ಕ್ಷೇತ್ರದ ನಿರ್ದೇಶಕ ವಂ.ರೋವೆಲ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಹೋತ್ಸವದ ಬಗ್ಗೆ ಮಾಹಿತಿ ನೀಡಿದ ಅವರು, ಜ.14ರಂದು ಬೆಳಗ್ಗೆ 10:30ಕ್ಕೆ ಜೆಪ್ಪು ಸೆಮಿನರಿಯ ವಂ. ರೊನಾಲ್ಡ್ ಸೆರಾವೊ ಹಾಗೂ ಸಂಜೆ 6 ಗಂಟೆಗೆ ಶಿವಮೊಗ್ಗ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಫ್ರಾನ್ಸಿಸ್ ಸೆರಾವೊ ಅಧ್ಯಕ್ಷತೆಯಲ್ಲಿ ಬಲಿಪೂಜೆ ನೆರವೇರಲಿದೆ. ಜ.15ರಂದು ಬೆಳಗ್ಗೆ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಪೀಟರ್ ಪಾವ್ಲ್ ಡಿಸೋಜ, ಸಂಜೆ ವಿಕಾರ್ ಜನರಲ್ ವಂ.ಮ್ಯಾಕ್ಸಿಮ್ ನೊರೊನ್ಹ ಬಲಿಪೂಜೆ ನೆರವೇರಿಸುವರು. ಜ.16ರಂದು ಬೆಳಗ್ಗೆ ವಂ. ಪಾವ್ಲ್ ಮೆಲ್ವಿನ್ ಡಿಸೋಜ, ಸಂಜೆ ಅ. ವಂ. ಅಲೋಶಿಯಸ್ ಪಾವ್ಲ್ ಡಿಸೋಜ ಬಲಿಪೂಜೆ ನೆರವೇರಿಸುವರು ಎಂದು ಹೇಳಿದರು.
ವಾರ್ಷಿಕ ಮಹೋತ್ಸವಕ್ಕೆ ಜ.4ರಂದು ಸಂಜೆ 5:30ಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗುವುದು. ಕೋವಿಡ್ ಮುಂಜಾಗೃತಾ ಕ್ರಮಗಳೊಂದಿಗೆ ಯಾತ್ರಿಗಳು ಹಾಗೂ ಭಕ್ತರಿಗೆ ಕ್ಷೇತ್ರದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಕೋವಿಡ್ ನಿವಾರಣೆಗಾಗಿ ವಿಶೇಷ ಪ್ರಾರ್ಥನೆಗಳನ್ನು ಕೂಡಾ ನಡೆಸಲಾಗುವುದು.
ವಾರ್ಷಿಕ ಮಹೋತ್ಸವದ ಅಂಗವಾಗಿ ನವದಿನಗಳ ಸಿದ್ಧತೆ ನೊವೇನ ಪ್ರಾರ್ಥನೆ ಜ.5ರಿಂದ 13ರವರೆಗೆ ನಡೆಯಲಿದೆ. ಮಾತ್ರವಲ್ಲದೆ, ದಿನದ ವಿವಿಧ ಅವಧಿಯಲ್ಲಿ ಕನ್ನಡ, ಕೊಂಕಣಿ, ಮಲಯಾಳಂ, ಇಂಗ್ಲಿಷ್ ಭಾಷೆಯಲ್ಲೂ ಬಲಿಪೂಜೆ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಉಪ ಮಠಾಧೀಶ ಲ್ಯಾನ್ಸಿ ಲೂವಿಸ್, ಸ್ಟಾನ್ಲಿ ಬಂಟ್ವಾಳ್ ಉಪಸ್ಥಿತರಿದ್ದರು