ಪ್ರಧಾನಿ ಮೋದಿಗೆ ನಂ.1 ಪಟ್ಟ ನೀಡಿದ ಅಮೆರಿಕಾ ಸಂಸ್ಥೆ: ಜೆ.ಪಿ ನಡ್ಡಾ ಟ್ವೀಟ್‌ ಗೆ ವ್ಯಂಗ್ಯಗಳ ಸರಮಾಲೆ

Update: 2021-01-02 12:40 GMT

ಹೊಸದಿಲ್ಲಿ: ಅಮೆರಿಕಾದ ಸಂಶೋಧನಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಅಧ್ಯಯನದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಜಾಗತಿಕ ನಾಯಕರ ಪೈಕಿ ಗರಿಷ್ಠ ರೇಟಿಂಗ್ ದೊರೆತಿದೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಇಂದು ಟ್ವಿಟರ್‌ ಮೂಲಕ ಮಾಹಿತಿ ನೀಡಿದ್ಧಾರೆ.

ಈ ಅಧ್ಯಯನದ ಪ್ರಕಾರ ಶೇ 75ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿಯನ್ನು  ಬೆಂಬಲಿಸಿದ್ದರೆ ಶೇ 20ರಷ್ಟು ಮಂದಿ ಅವರ ನಾಯಕತ್ವವನ್ನು ಬೆಂಬಲಿಸಿಲ್ಲ. ಈ ರೀತಿಯಾಗಿ ಪ್ರಧಾನಿ ಮೋದಿಯನ್ನು   ಅನುಮೋದಿಸುವ ಒಟ್ಟು  ಮಂದಿಯ ಪ್ರಮಾಣ ಶೇ 55ರಷ್ಟು ಎಂದು ಸಂಸ್ಥೆ ಹೇಳಿದ್ದು ಇತರ ಜಾಗತಿಕ ನಾಯಕರುಗಳ ಪೈಕಿ ಇದು ಗರಿಷ್ಠವಾಗಿದೆ ಎಂದು ತಿಳಿಸಿದೆ.

"ಕೋವಿಡ್-19 ಸಾಂಕ್ರಾಮಿಕ ಮತ್ತು ಇತರ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿದ ಜಗತ್ತಿನ  ನಾಯಕರ ಪೈಕಿ ಅತ್ಯುನ್ನತ ಸ್ಥಾನವನ್ನು ನಮ್ಮ ಪ್ರಧಾನಿ ಪಡೆದಿದ್ದಾರೆ,'' ಎಂದು ನಡ್ಡಾ ಟ್ವೀಟ್ ಒಂದರಲ್ಲಿ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪ್ರಧಾನಿ ಮೋದಿಗೆ ದೊರೆತ ಗರಿಷ್ಠ ಅಪ್ರೂವಲ್ ರೇಟಿಂಗ್‍ಗಾಗಿ ಅಭಿನಂದಿಸಿ ಟ್ವೀಟ್ ಮಾಡಿದ್ದಾರಲ್ಲದೆ ಇಡೀ ಜಗತ್ತೇ ಪ್ರಧಾನಿಯನ್ನು ಶ್ಲಾಘಿಸುತ್ತಿದೆ ಎಂದು ಬರೆದಿದ್ದಾರೆ.

ಈ ನಡುವೆ ಈ ಟ್ವೀಟ್‌ ಗೆ ವ್ಯಾಪಕ ವ್ಯಂಗ್ಯ ಪ್ರತಿಕ್ರಿಯೆಗಳು ಕೂಡಾ ದಾಖಲಾಗಿವೆ. ಯಾವುದೇ ಒಂದು ಕೆಲಸ ಕಾರ್ಯಗಳನ್ನು ಮಾಡದ್ದಕ್ಕಾಗಿ ಪ್ರಧಾನಿಗೆ ಈ ಶ್ರೇಣಿ ದೊರಕಿರಬಹುದು ಎಂದು ಬಳಕೆದಾರರೋರ್ವರು ಹೇಳಿಕೆ ನೀಡಿದ್ದರೆ, ಹಲವು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ೫0ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಅದರ ಕುರಿತು ಗಮನ ಹರಿಸಿ ಎಂದು ಹೇಳಿಕೆ ನೀಡಿದ್ದಾರೆ. "ನಾವು ಮೋದಿಯನ್ನೇ ವೈಭವೀಕರಿಸುತ್ತಿದ್ದೇವೆ. ನಮ್ಮ ದೇಶದ ಅಂಕಿ ಅಂಶಗಳು, ಶ್ರೇಣಿಗಳು ಎಲ್ಲಾ ಕುಸಿತ ಕಾಣುತ್ತಿದೆ. ಈ ಕುರಿತು ಏಕೆ ಮಾತನಾಡುತ್ತಿಲ್ಲ" ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News