ಹೊಸವರ್ಷ ಕಾರ್ಯಕ್ರಮದಲ್ಲಿ ಹಿಂದೂಗಳಿಗೆ ಮತ್ತು ಅಮಿತ್‌ ಶಾಗೆ ಅವಮಾನ ಆರೋಪ: ಕಾಮೆಡಿಯನ್‌ ಬಂಧನ

Update: 2021-01-02 12:25 GMT

ಭೋಪಾಲ್,ಜ.2: ಇಂದೋರ್ ನಗರದ ಕೆಫೆಯೊಂದರಲ್ಲಿ ಆಯೋಜಿಸಲಾಗಿದ್ದ ಹೊಸ ವರ್ಷದ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕೆ ಹಾಗೂ  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅವವಾನಿಸಿದ ಆರೋಪದ ಮೇಲೆ  ಮುಂಬೈಯ ಕಾಮಿಡಿಯನ್ ಮುನಾವರ್ ಫಾರೂಖಿ ಹಾಗೂ ಇತರ ನಾಲ್ಕು ಮಂದಿ ಕಾರ್ಯಕ್ರಮ ಸಂಘಟಕರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ಹಿಂದು ಸಂಘಟನೆಗಳ ಕಾರ್ಯಕರ್ತರು ಕಾರ್ಯಕ್ರಮ ನಡೆದ ಸ್ಥಳಕ್ಕೆ ತೆರಳಿ ಕಾರ್ಯಕ್ರಮವನ್ನು ನಿಲ್ಲಿಸಿದಾಗ ಕಾಮಿಡಿಯನ್ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಬಂಧಿತ ಇತರರನ್ನು ಪ್ರಖಾರ್ ವ್ಯಾಸ್, ಪ್ರಿಯಂ ವ್ಯಾಸ್, ನಳಿನ್ ಯಾದವ್ ಹಾಗೂ ಎಡ್ವಿನ್ ಆಂಟನಿ ಎಂದು ಗುರುತಿಸಲಾಗಿದೆ.

ಬಿಜೆಪಿ ಶಾಸಕಿ ಮಾಲಿನಿ ಗೌರ್ ಪುತ್ರ ಹಾಗೂ ಹಿಂದು ರಕ್ಷಕ್ ಸಂಘಟನ್ ಸಂಚಾಲಕ ಏಕಲವ್ಯ ಗೌರ್ ನೀಡಿದ ದೂರಿನ ಆಧಾರದಲ್ಲಿ ಬಂಧನ ನಡೆದಿದೆ.

"ಮುನಾವರ್ ಈ ಹಿಂದೆ ಕೂಡ ಹಿಂದು ದೇವ ದೇವತೆಗಳನ್ನು ಅವಮಾನಿಸಿದ್ದಾರೆ. ಕಾರ್ಯಕ್ರಮದ ಬಗ್ಗೆ ತಿಳಿದಾಗ ನಾವೂ ಟಿಕೆಟ್ ಖರೀದಿಸಿದ್ದೆವು.  ಈ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರೆತ್ತಿ ಗೋಧ್ರಾ ಘಟನೆಯಲ್ಲಿ ಅವರ ಹೆಸರನ್ನು ಎಳೆದು ತಂದಿದ್ದರು, ತಕ್ಷಣ ಕಾರ್ಯಕ್ರಮ ನಿಲ್ಲಿಸಿ, ಸಭಿಕರನ್ನು ಹೊರಗೆ ಕಳುಹಿಸಿ ಪ್ರದರ್ಶನ ನೀಡುತ್ತಿದ್ದವರನ್ನು ಹಾಗೂ ಸಂಘಟಕರನ್ನು ಠಾಣೆಗೆ ಕರೆದೊಯ್ದೆವು," ಎಂದು ಗೌರ್ ಹೇಳಿದ್ದಾರೆ.

ತಮ್ಮ ದೂರಿನ ಜತೆಗೆ ಕಾಮಿಡಿ ಶೋ ದ ವೀಡಿಯೋವನ್ನೂ ಗೌರ್ ನೀಡಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News