ಕೊರೋನ ಲಸಿಕೆಗಳನ್ನು ಹಾಳು ಮಾಡಿದ ಫಾರ್ಮಾಸಿಸ್ಟ್ ಬಂಧನ
Update: 2021-01-02 19:52 IST
ನ್ಯೂಯಾರ್ಕ್, ಜ. 2: ಕೊರೋನ ವೈರಸ್ ಲಸಿಕೆಯ 500ಕ್ಕೂ ಅಧಿಕ ಡೋಸ್‌ಗಳನ್ನು ಹಾಳು ಮಾಡುವ ಉದ್ದೇಶದಿಂದ ಶೈತ್ಯಾಗಾರದಿಂದ ಹೊರತೆಗೆದ ಆರೋಪದಲ್ಲಿ ವಿಸ್‌ಕಾನ್ಸಿನ್ ರಾಜ್ಯದ ಆಸ್ಪತ್ರೆಯೊಂದರ ಫಾರ್ಮಾಸಿಸ್ಟ್ (ಔಷಧ ಮಾರಾಟಗಾರ)ನನ್ನು ಗುರುವಾರ ಬಂಧಿಸಲಾಗಿದೆ.
ಆತನು ಈ ವಾರದ ಆರಂಭದಲ್ಲಿ ಲಸಿಕೆಯ 57 ವಯಲ್‌ಗಳನ್ನು ಶೈತ್ಯಾಗಾರದಿಂದ ಹೊರಗಿಟ್ಟಿದ್ದನು ಎಂದು ಆರೋಪಿಸಲಾಗಿದೆ. ಪ್ರತಿ ವಯಲ್‌ನಲ್ಲಿ 10 ಡೋಸ್‌ಗಳಿರುತ್ತವೆ. ಆತನನ್ನು ಈಗ ಆಸ್ಪತ್ರೆಯ ಕೆಲಸದಿಂದಲೂ ವಜಾಗೊಳಿಸಲಾಗಿದೆ.
ಲಸಿಕೆಯು ಪರಿಣಾಮಕಾರಿಯಾಗದಂತೆ ತಡೆಯುವುದಕ್ಕಾಗಿ ಅದನ್ನು ಸಾಕಷ್ಟು ಅವಧಿಗೆ ಶೈತ್ಯಾಗಾರದಿಂದ ಹೊರಗಿಡಲಾಗಿತ್ತು ಎಂಬ ನಿರ್ಧಾರಕ್ಕೆ ವೈದ್ಯರು ಬರುವ ಮುನ್ನ, ಅವುಗಳ 60 ಡೋಸ್‌ಗಳನ್ನು ನೀಡಲಾಗಿತ್ತು. ಬಳಿಕ, ಉಳಿದ 500ಕ್ಕೂ ಅಧಿಕ ಡೋಸ್‌ಗಳನ್ನು ಎಸೆಯಲಾಯಿತು.
ಫಾರ್ಮಾಸಿಸ್ಟ್ ಈ ಕೃತ್ಯವೆಸಗಲು ಕಾರಣವೇನೆಂದು ಪೊಲೀಸರು ಬಹಿರಂಗಪಡಿಸಿಲ್ಲ.