ಭಾರತದಲ್ಲಿ ಕೋವಿಡ್ ಲಸಿಕೆ ನೀಡಿಕೆ ಅಭಿಯಾನ : ಮೊದಲ ಹಂತದಲ್ಲಿ 3 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ
ಹೊಸದಿಲ್ಲಿ, ಜ. 1: ಭಾರತದಲ್ಲಿ ಕೋವಿಡ್ ಲಸಿಕೆ ನೀಡುವ ಬೃಹತ್ ಅಭಿಯಾನದ ಮೊದಲ ಹಂತದಲ್ಲಿ 3 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಶನಿವಾರ ಹೇಳಿದ್ದಾರೆ.
‘‘ಕೋವಿಡ್ ಲಸಿಕೆ ನೀಡಿಕೆಯ ಮೊದಲ ಹಂತದಲ್ಲಿ ದೇಶಾದ್ಯಂತದ 1 ಕೋಟಿ ಆರೋಗ್ಯಸೇವೆ ಕಾರ್ಯಕರ್ತರು ಹಾಗೂ 2 ಕೋಟಿ ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಹೆಚ್ಚಿನ ಆದ್ಯತೆಯ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುವುದು’’ ಎಂದು ಡಾ. ಹರ್ಷವರ್ಧನ್ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. ಜುಲೈ ತನಕ ಇನ್ನೂ 27 ಕೋಟಿ ಆದ್ಯತಾ ಫಲಾನುಭವಿಗಳಿಗೆ ಹೇಗೆ ಲಸಿಕೆ ನೀಡುವುದು ಎಂಬ ಬಗೆಗಿನ ವಿವರಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಲಸಿಕೆಯನ್ನು ಜನರಿಗೆ ನೀಡುವ ಮುನ್ನ ಕೋವಿಡ್ ಲಸಿಕೆಯ ಪೂರ್ವಾಭ್ಯಾಸ (ಡ್ರೈ ರನ್) ಇಂದಿನಿಂದ ದೇಶಾದ್ಯಂತ ಆರಂಭಿಸಲಾಗಿದೆ ಎಂದು ಹೇಳಿದ ಹರ್ಷವರ್ಧನ್, ಕೋವಿಡ್ ಲಸಿಕೆಯ ಬಗೆಗಿನ ವದಂತಿಗೆ ಕಿವಿಗೊಡಬಾರದು ಎಂದು ಜನರಲ್ಲಿ ಮನವಿ ಮಾಡಿದರು. ದಿಲ್ಲಿಯ ಗುರು ತೇಗ್ ಬಹಾದ್ದೂರ್ (ಜಿಟಿಬಿ) ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆಯ ಪೂರ್ವಭ್ಯಾಸ ನೀಡಿಕೆಯನ್ನು ಪರಿಶೀಲಿಸಿದ ಬಳಿಕ ಹರ್ಷವರ್ಧನ್ ಮಾಧ್ಯಮದವರೊಂದಿಗೆ ಮಾತನಾಡಿದರು. ‘‘ವದಂತಿಗೆ ಕಿವಿಗೊಡಬೇಡಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ. ಲಸಿಕೆಯ ಸುರಕ್ಷತೆ ಹಾಗೂ ಪರಿಣಾಮಕಾರಿಯ ಖಾತರಿ ನೀಡುವುದು ನಮ್ಮ ಆದ್ಯತೆ. ಪೊಲಿಯೊ ಲಸಿಕೆಯ ಸಂದರ್ಭ ವಿವಿಧ ರೀತಿಯ ವದಂತಿ ಹಬ್ಬಿತ್ತು. ಆದರೆ, ಜನರು ಲಸಿಕೆ ತೆಗೆದುಕೊಂಡರು. ಈಗ ಭಾರತ ಪೋಲಿಯೊ ಮುಕ್ತವಾಗಿದೆ’’ ಎಂದು ಅವರು ತಿಳಿಸಿದರು. ನಿಜವಾದ ಲಸಿಕೆ ನೀಡುವ ಮೊದಲ ಪೂರ್ವಭ್ಯಾಸದ ಸಂದರ್ಭ ಪ್ರತಿಯೊಂದು ನಿಬಂಧನೆಗಳನ್ನು ಅನುಸರಿಸಲಾಗಿದೆ ಎಂದು ಅವರು ತಿಳಿಸಿದರು.