×
Ad

ಮರ್ಮಾಂಗಕ್ಕೆ ತುಳಿದು ಮಾವನ ಕೊಲೆ: ಆಳಿಯ ಬಂಧನ

Update: 2021-01-02 21:02 IST

ಕಾರ್ಕಳ, ಜ.2: ಕ್ಷುಲ್ಲಕ ಕಾರಣಕ್ಕಾಗಿ ಅಳಿಯ ತನ್ನ ಮಾವನ ಮರ್ಮಾಂಗಕ್ಕೆ ಬಲವಾಗಿ ತುಳಿದ ಪರಿಣಾಮ ಮಾವ ಮೃತಪಟ್ಟ ಘಟನೆ ಕಾರ್ಕಳ ಹಂಚಿಕಟ್ಟೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಾರ್ಕಳ ಹಂಚಿಕಟ್ಟೆ ನಿವಾಸಿ ಶೇಕ್ ಅಬೂಬಕ್ಕರ್(57) ಕೊಲೆಯಾದ ವ್ಯಕ್ತಿ. ಇವರ ಮಗಳ ಗಂಡ ಮೂಡಬಿದ್ರೆ ಹೊಸಗಂಡಿಯ ತೌಸೀಫ್(28) ಬಂಧಿತ ಕೊಲೆ ಆರೋಪಿ. ತೌಸೀಫ್‌ಗೆ ಡಿ.20ರಂದು ಮದುವೆಯಾಗಿದ್ದು, ಡಿ.31 ರಂದು ರಾತ್ರಿ ತಂದೆ ಮತ್ತು ಮಗಳ ಮಧ್ಯೆ ಜಗಳ ನಡೆಯುತ್ತಿದ್ದ ವಿಚಾರದಲ್ಲಿ ತೌಸೀಫ್ ಮಧ್ಯ ಪ್ರವೇಶಿಸಿದ ಎನ್ನಲಾಗಿದೆ.

ಈ ವೇಳೆ ಇವರ ಮಧ್ಯೆ ಮಾತಿನ ಚಕಮಕಿ ನಡೆದು ತೌಸೀಫ್, ಮಾವನ ಕೆನ್ನೆಗೆ ಹೊಡೆದು ಬಲವಾಗಿ ದೂಡಿ ಹಾಕಿದನು. ಇದರಿಂದ ನೆಲಕ್ಕೆ ಬಿದ್ದು ತಲೆಗೆ ಒಳನೋವು ಆಗಿದ್ದಲ್ಲದೆ ಬಳಿಕ ತೌಸೀಫ್ ಕಾಲಿನಿಂದ ಅವರ ಮರ್ಮಾಂಗಕ್ಕೆ ಬಲವಾಗಿ ತುಳಿದ ಎಂದು ದೂರಲಾಗಿದೆ. ಇದರಿಂದ ಗಂಭೀರವಾಗಿ ಗಾಯ ಗೊಂಡ ಅಬೂಬಕ್ಕರ್ ಜ.1ರಂದು ರಾತ್ರಿ 10:10 ಸುಮಾರಿಗೆ ಚಿಕಿತ್ಸೆ ಫಲ ಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.

ಈ ಬಗ್ಗೆ ಮೃತರ ಸಂಬಂಧಿ ಹಸನಬ್ಬ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News