×
Ad

ಮಧ್ಯಪ್ರದೇಶ ಸಂಪುಟ ವಿಸ್ತರಣೆ: ಸಿಂಧಿಯಾ ಆಪ್ತರಿಗೆ ಸ್ಥಾನ

Update: 2021-01-03 19:11 IST

ಭೋಪಾಲ್, ಜ.3: ಮಧ್ಯಪ್ರದೇಶ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಾಗಿದ್ದು ಜ್ಯೋತಿರಾದಿತ್ಯ ಸಿಂಧಿಯಾಗೆ ನಿಷ್ಟರಾಗಿರುವ ಇಬ್ಬರು ಶಾಸಕರಿಗೆ ಸಚಿವ ಹುದ್ದೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ತುಳಸೀರಾಮ್ ಸಿಲಾವತ್ ಮತ್ತು ಗೋವಿಂದ್ ರಜಪೂತ್‌ಗೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಶಿವ್ ರಾಜ್ ಸಿಂಗ್ ಚೌಹಾಣ್, ಹಂಗಾಮಿ ಸ್ಪೀಕರ್ ರಾಮೇಶ್ವರ್ ಶರ್ಮ ಹಾಗೂ ಹಲವು ಸಚಿವರು ಉಪಸ್ಥಿತರಿದ್ದರು. ಇಬ್ಬರ ಸೇರ್ಪಡೆಯೊಂದಿಗೆ ಸಂಪುಟದ ಬಲ 31ಕ್ಕೇರಿದೆ.

ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಮಾರ್ಚ್‌ನಲ್ಲಿ ಪತನವಾಗಿದ್ದು ಕಾಂಗ್ರೆಸ್‌ಗೆ ಕೈಕೊಟ್ಟ ಭಿನ್ನಮತೀಯರ ನೆರವಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕಮಲನಾಥ್ ಸರಕಾರದಲ್ಲಿ ಸಚಿವರಾಗಿದ್ದು ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದ ತುಳಸೀರಾಮ್ ಸಿಲಾವತ್ ಮತ್ತು ಗೋವಿಂದ್ ರಜಪೂತ್ ಸುಮಾರು 2 ತಿಂಗಳ ಬಳಿಕ ಮತ್ತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮಧ್ಯೆ, ಉಪಚುನಾವಣೆಯಲ್ಲಿ ಸೋಲುಂಡ ಇಬ್ಬರು ಸಚಿವರಾದ ಇಮಾರ್ತಿ ದೇವಿ ಮತ್ತು ಗಿರಿರಾಜ ದಂಡೋಟಿಯಾ ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ರಾಜಭವನದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News