ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ: ಆಕ್ಷೇಪಿಸಿದ ವ್ಯಕ್ತಿಯ ಥಳಿಸಿ ಹತ್ಯೆ
ಮುಂಬೈ, ಜ.3: ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡಿದ್ದನ್ನು ಆಕ್ಷೇಪಿಸಿದ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆಗೈದ ಆರೋಪದಲ್ಲಿ ನಾಲ್ವರನ್ನು ಬಂಧಿಸಿರುವುದಾಗಿ ನವಿ ಮುಂಬೈ ಪೊಲೀಸರು ರವಿವಾರ ಹೇಳಿದ್ದಾರೆ.
ಶುಕ್ರವಾರ ಸಾಠೆ ನಗರದಲ್ಲಿ ಆಕಾಶ್ ಗಾಯಕ್‌ವಾಡ್ ಎಂಬಾತ ರಸ್ತೆಬದಿ ಮೂತ್ರವಿಸರ್ಜನೆ ಮಾಡುತ್ತಿದ್ದ. ಇದನ್ನು ಸ್ಥಳೀಯ ವ್ಯಕ್ತಿ ಸಚಿನ್ ಪಾಟೀಲ್ (35 ವರ್ಷ) ಎಂಬಾತ ಆಕ್ಷೇಪಿಸಿದಾಗ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಸ್ಥಳಕ್ಕೆ ಬಂದ ಗಾಯಕ್‌ವಾಡ್‌ನ ಮೂವರು ಗೆಳೆಯರು ಸೇರಿಕೊಂಡು ಪಾಟೀಲ್‌ನನ್ನು ಥಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡ ಪಾಟೀಲ್‌ನನ್ನು ಬಳಿಕ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು ಆ ವೇಳೆಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಖಚಿತ ಮಾಹಿತಿಯ ಆಧಾರದಲ್ಲಿ ಗಾಯಕ್ವಾಡ್ ಮತ್ತು ಆತನ ಮೂವರು ಮಿತ್ರರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಗೆ ಜನವರಿ 5ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.