×
Ad

ಅದೃಷ್ಟದ ಬದಲು, ಸಾಮರ್ಥ್ಯ, ಪರಿಶ್ರಮ ಅವಲಂಬಿಸಿ ಬದುಕಿ: ನೇಮಿಚಂದ್ರ

Update: 2021-01-03 19:35 IST

ಉಡುಪಿ, ಜ.3: ಅದೃಷ್ಟವನ್ನು ಅವಲಂಬಿಸಿ ಬದುಕುವ ಬದಲು, ನಮ್ಮ ಸಾಮರ್ಥ್ಯ, ಪರಿಶ್ರಮ, ಬದುಕಿನ ಮೇಲಿನ ವಿಶ್ವಾಸ, ಪ್ರೀತಿಯನ್ನು ಅವಲಂಬಿಸಿ ಬದುಕಬೇಕು. ಆಗ ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯ ಎಂದು ಲೇಖಕಿ ನೇಮಿಚಂದ್ರ ಹೇಳಿದ್ದಾರೆ.

ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ 1050 ವಿದ್ಯಾರ್ಥಿಗಳಿಗೆ ಸುಮಾರು 70ಲಕ್ಷ ರೂ. ವಿದ್ಯಾರ್ಥಿವೇತನ, ಲ್ಯಾಪ್‌ಟಾಪ್, ಮನೆಗೆ ವಿದ್ಯು ದ್ದೀಪ, ಸೌರಶಕ್ತಿ ವಿತರಣಾ ಸಮಾರಂಭದಲ್ಲಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತಿದ್ದರು.

ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಕನಸು ಕಾಣಬೇಕು. ಈ ಮಾತು ನನ್ನ ಅನುಭವದಲ್ಲಿ ಸತ್ಯ ಆಗಿದೆ. ವಿದ್ಯಾರ್ಥಿಗಳ ವಿದ್ಯಾರ್ಜಾನೆಯ ಕನಸು ಅವರನ್ನು ನಿದ್ರೆ ಮಾಡಲು ಬಿಡಬಾರದು. ಅದು ಅವರ ಬದುಕಿಗೆ ಬೆಂಬಲ ಆಗುತ್ತದೆ. ಅದೇ ರೀತಿ ನಮ್ಮ ಬದುಕಿನಲ್ಲಿ ರೋಲ್ ಮಾಡೆಲ್‌ಗಳನ್ನು ಆರಿಸಿಕೊಳ್ಳಬೇಕು. ಇದು ಸಾಕಷ್ಟು ಪರಿಣಾಮ ಬೀರುತ್ತದೆ. ಅಲ್ಲದೆ ಬದುಕಿನ ಪ್ರತಿಯೊಂದು ಆಯ್ಕೆ ಯ ಕುರಿತ ನಿರ್ಧಾರವನ್ನು ನಾವೇ ತೆಗೆದುಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬಾಳಿನಲ್ಲಿ ಸಿಗುವ ಅಮೂಲ್ಯ ಕ್ಷಣ. ಕಲಿಕೆ ಸಂದರ್ಭ ಸಮಯ ವ್ಯರ್ಥ ಮಾಡದೇ, ಒಳ್ಳೆಯ ಚಿಂತನೆಗಳೊಂದಿಗೆ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ಸಹಾಯಧನ ವಿತರಿಸಿದ ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶ ಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಜೀವಮಾನ ಪರ್ಯಂತ ಒಟ್ಟುಗೂಡಿಸುವ ಸಂಪತಿತಿನ ಒಂದಾಂಶವನ್ನು ಸಮಾಜಮುಖಿ ಚಿಂತನೆಯ ಸತ್ಕಾರಗಳಿಗೆ ದಾನ ಮಾಡುವ ಮೂಲಕ ಭಗವಂತನ ಅನುಗ್ರಹ್ಕೆ ಪಾತ್ರರಾಗಬೇಕು ಎಂದರು.

ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು. ಅಂಬಲ ಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಇನ್ಫೋಸಿಸ್ ಫೌಂಡೇಶನ್‌ನ ಉಪಾಧ್ಯಕ್ಷ ರವಿರಾಜ ಬೆಳ್ಮ, ಉದ್ಯಮಿ ಪುರುಷೋತ್ತಮ ಪಟೇಲ್, ಸೆಲ್ಕೋ ಸೋಲಾರ್‌ನ ಗುರುಪ್ರಕಾಶ ಶೆಟ್ಟಿ, ನಿವೃತ್ತ ಶಿಕ್ಷಕ ಪಡುಪೇಟೆ ರಾಜಗೋಪಾಲಾಚಾರ್ಯ, ಹಿರಿಯ ದಾನಿ ವಿಲಾಸಿನಿ ಶೆಣೈ ಮುಖ್ಯ ಅತಿಥಿ ಗಳಾಗಿದ್ದರು.

ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಮಾಜಿ ಅಧ್ಯಕ್ಷ ಕೆ.ಗಣೇಶ್ ರಾವ್, ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು. ಹಿರಿಯ ಉಪಾಧ್ಯಕ್ಷ ಎಸ್.ವಿ.ಭಟ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶೃಂಗೇಶ್ ವಂದಿಸಿದರು. ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಕಾಡಿದ ಲಿಂಗ ತಾರತಮ್ಯ

‘ಎಂಟನೆ ತರಗತಿಯಲ್ಲಿ ಇರುವಾಗ ವಿಜ್ಞಾನ ಸಂಸ್ಥೆಯೊಂದು ಏರ್ಪಡಿಸಿದ್ದ ವಿಜ್ಞಾನ ಪ್ರಬಂಧ ಸ್ಪಧೆರ್ರ್ಯಲ್ಲಿ ನನಗೆ ಪುಸ್ತಕ ಬಹುಮಾನ ಸಿಕ್ಕಿತು. 13 ವರ್ಷದ ನನಗೆ ಆ ಸಂದರ್ಭದಲ್ಲಿ ವಿಜ್ಞಾನ ಸಂಸ್ಥೆ, ವಿಜ್ಞಾನ ಪ್ರಬಂಧ ಸ್ಪರ್ಧೆಗೆ ನನಗೆ ಕೊಟ್ಟದ್ದು ಒಂದು ಅಡುಗೆ ಮತ್ತು ಇನ್ನೊಂದು ತಾಯಿ ಮಗು ಪುಸ್ತಕ. ಆದರೆ ಗಂಡು ಮಕ್ಕಳಿಗೆ ವಿಮಾನ, ವಿಜ್ಞಾನ, ಗ್ಯಾಲಕ್ಸಿಗಳ ಕುರಿತ ಪುಸ್ತಕಗಳನ್ನು ನೀಡಿತ್ತು. ಈ ರೀತಿಯ ಲಿಂಗ ತಾರತಮ್ಯ ನನ್ನನ್ನು ಬಹಳವಾಗಿ ಕಾಡುತ್ತಿತ್ತು. ಇದುವೇ ಮುಂದೆ ನಾನು ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳಲು ಕಾರಣವಾಯಿತು’ ಎಂದು ನೇಮಿಚಂದ್ರ ತಮ್ಮ ಬದುಕಿನ ಅನುಭವ ವನ್ನು ವಿದ್ಯಾರ್ಥಿಗಳ ಮುಂದೆ ಬಿಚ್ಚಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News