ದಿಲ್ಲಿಯ ಕೊರೆಯುವ ಚಳಿ,ಮಳೆಯ ನಡುವೆಯೂ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ರೈತರು

Update: 2021-01-03 14:39 GMT

ಹೊಸದಿಲ್ಲಿ,ಜ.3: ರಾಜಧಾನಿ ದಿಲ್ಲಿಯಲ್ಲಿ ರವಿವಾರ ನಸುಕಿನಿಂದಲೇ ಭಾರೀ ಗುಡುಗು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆಯಾಗಿದ್ದು,ಆಗಸದಲ್ಲಿ ಕಪ್ಪುಮೋಡಗಳು ತುಂಬಿಕೊಂಡು ತಾಪಮಾನ ಎಂಟು ಡಿಗ್ರಿ ಸೆಲ್ಶಿಯಸ್‌ಗೆ ಇಳಿದಿತ್ತು. ಆದರೆ ಮೈ ಕೊರೆಯುವ ಚಳಿ ಮತ್ತು ಧಾರಾಕಾರ ಮಳೆ ಕೇಂದ್ರವು ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂಬ ಮುಖ್ಯ ಬೇಡಿಕೆಯೊಂದಿಗೆ ದಿಲ್ಲಿಯ ಗಡಿಗಳಲ್ಲಿ ಮೊಕ್ಕಾಂ ಹೂಡಿರುವ ರೈತರನ್ನು ಧೃತಿಗೆಡಿಸಲಿಲ್ಲ. ಚಳಿಯನ್ನೂ ಲೆಕ್ಕಿಸದೆ ಕೆಲವು ರೈತರು ತೊಟ್ಟಿದ್ದ ಶರ್ಟ್‌ಗಳನ್ನು ಕಿತ್ತೆಸೆದು ‘ಜೈ ಜವಾನ್ ಜೈ ಕಿಸಾನ್’ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ನಡೆಸಿದರು.

ದಿಲ್ಲಿ ನಿವಾಸಿಗಳು ಕಿಟಕಿಗಳಲ್ಲಿ ಮತ್ತು ಲಾನ್‌ಗಳಲ್ಲಿ ಸಂಗ್ರಹಗೊಂಡಿದ್ದ ಹಿಮದ ಚಿತ್ರಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡುತ್ತಿದ್ದರೆ ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರು ಮಳೆಯ ನೀರಿನಲ್ಲಿ ನೆನೆದಿದ್ದ ತಮ್ಮ ಹಾಸಿಗೆಗಳನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದರು. ರವಿವಾರ ಸತತ ಎರಡನೇ ದಿನವೂ ದಿಲ್ಲಿಯಲ್ಲಿ ಮಳೆ ಸುರಿದಿದ್ದು,ಇದೇ ವೇಳೆ ರೈತರ ಪ್ರತಿಭಟನೆ 39 ದಿನಗಳನ್ನು ಪೂರೈಸಿದೆ.

‘ಚಳಿಗಾಲದಲ್ಲಿ ಬೆಳಿಗ್ಗೆ ನಮ್ಮ ಹೊಲಗಳಿಗೆ ನೀರು ಹಾಯಿಸುವಾಗ ಇದಕ್ಕಿಂತ ಹೆಚ್ಚು ಕಷ್ಟವನ್ನು ನಾವು ಅನುಭವಿಸುತ್ತೇವೆ. ಈ ಹವಾಮಾನ ನಮ್ಮ ಆಂದೋಲನದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ’ಎಂದು ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಪಂಜಾಬಿನ ತರನ್ ತರನ್‌ನ ರೈತ ಹರ್ಜೀತ್ ಸಿಂಗ್ ಜೋಹಾಲ್ ಹೇಳಿದರು. ಜೋಹಾಲ್‌ರಂತೆ ಸಾವಿರಾರು ರೈತರು ಘಾಝಿಪುರ,ಟಿಕ್ರಿ,ಚಿಲ್ಲಾ, ಶಾಹಜಹಾನ್‌ಪುರ ಮತ್ತು ಸಿಂಘುವಿನಂತಹ ಗಡಿ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವರು ಸರಕಾರಕ್ಕೆ ಕಠಿಣ ಸಂದೇಶವನ್ನು ರವಾನಿಸಲು ಶರ್ಟ್‌ಗಳನ್ನು ಬಿಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

‘ಕಷ್ಟಗಳನ್ನು ಎದುರಿಸಲು ರೈತರು ಎಂದೂ ಹಿಂಜರಿಯುವುದಿಲ್ಲ. ನಮ್ಮ ಬೇಡಿಕೆಗಳು ಈಡೇರದಿದ್ದರೆ ಜ.26ರಂದು ಜಾಥಾದಲ್ಲಿಯೂ ನಾನು ಇದೇ ರೀತಿ ಶರ್ಟ್ ಧರಿಸದೆ ತೆರಳುತ್ತೇನೆ ’ಎಂದು ಉತ್ತರ ಪ್ರದೇಶದ ರೈತ ದದ್ದನ್ ಸಿಂಗ್ ಹೇಳಿದರು. ತಮ್ಮ ಪ್ರಮುಖ ಬೇಡಿಕೆಗಳು ಈಡೇರದಿದ್ದರೆ ಜ.26ರಂದು ಸಾಂಪ್ರದಾಯಿಕ ಗಣರಾಜ್ಯೋತ್ಸವ ಪರೇಡ್‌ಗೆ ಸಮಾನಾಂತರವಾಗಿ ‘ಕಿಸಾನ್ ಪರೇಡ್’ ಟ್ರಾಕ್ಟರ್ ರ್ಯಾಲಿಯನ್ನು ನಡೆಸುವುದಾಗಿ ರೈತ ಸಂಘಟನೆಗಳು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿವೆ.

ಸಿಂಘು ಪ್ರತಿಭಟನಾ ತಾಣದಲ್ಲಿರುವ ಸುಮಾರು 200 ಟೆಂಟ್‌ಗಳು ಮಳೆಯಿಂದಾಗಿ ರೈತರಿಂದ ತುಂಬಿಹೋಗಿವೆ. ತನ್ನ ತಂಡವು ಶಾಹಜಹಾನ್‌ಪುರದಲ್ಲಿಯೂ ಕೆಲವು ಟೆಂಟ್‌ಗಳನ್ನು ಸ್ಥಾಪಿಸಿದೆ ಎಂದು ಹೇಮಕುಂಡ ಪ್ರತಿಷ್ಠಾನದ ಸ್ವಯಂಸೇವಕ ಬಾಲ್ ಸಿಂಗ್ ತಿಳಿಸಿದರು. ಎನ್‌ಜಿಒ ಖಾಲ್ಸಾ ಏಯ್ಡ್ ಇಂಡಿಯಾ ಪ್ರತಿಭಟನಾಕಾರರಿಗೆ ವಿದ್ಯುತ್‌ರಹಿತ ಗೀಜರ್‌ಗಳು, ಟಾರ್ಪಾಲಿನ್ ಟೆಂಟ್‌ಗಳು ಮತ್ತು 10,000 ರೇನ್‌ಕೋಟ್‌ಗಳನ್ನು ಒದಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News