ಕಾರ್ಕಳದ ಮಹಿಳೆ ಕೋವಿಡ್‌ಗೆ ಬಲಿ

Update: 2021-01-04 14:18 GMT

ಉಡುಪಿ, ಜ.4: 18 ದಿನಗಳ ಬಳಿಕ ಕೋವಿಡ್-19 ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಬಲಿಯನ್ನು ಪಡೆದಿದೆ. ಕಾರ್ಕಳ ತಾಲೂಕಿನ 59ರ ಹರೆಯದ ಮಹಿಳೆ ರವಿವಾರ ಮಣಿಪಾಲ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನೊಂದಿಗೆ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ ನಿಂದ ಮೃತಪಟ್ಟವರ ಸಂಖ್ಯೆ 189ಕ್ಕೇರಿದೆ.

ಕೋವಿಡ್‌ನ ಗುಣಲಕ್ಷಣದೊಂದಿಗೆ ಕ್ಯಾನ್ಸರ್ ಕಾಯಿಲೆಯಿಂದ ನರಳುತಿದ್ದ ಕಾರ್ಕಳ ತೆಳ್ಳಾರ್ ರೋಡ್ ನಿವಾಸಿ ಮಹಿಳೆ ಕಳೆದ ಡಿ.27ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟರು. ಕಳೆದ ಡಿ.17ರಂದು ಕಾರ್ಕಳದ 69 ವರ್ಷ ಪ್ರಾಯದ ಪುರುಷರೊಬ್ಬರು ಮೃತಪಟ್ಟ ಬಳಿಕ, ಕೋವಿಡ್‌ಗೆ ಜಿಲ್ಲೆಯಲ್ಲಿ ಬಲಿಯಾದ ಮೊದಲ ರೋಗಿ ಇವರಾಗಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 9 ಮಂದಿಯಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ದಿನದಲ್ಲಿ 14 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಸದ್ಯ 90 ಮಂದಿ ಸೋಂಕಿಗಾಗಿ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದವರಲ್ಲಿ ಐವರು ಪುರುಷರು ಮತ್ತು ನಾಲ್ವರು ಮಹಿಳೆಯರು. ಪಾಸಿಟಿವ್ ಬಂದ ಐವರು ಪುರುಷರು ಹಾಗೂ ಮೂವರು ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಇವರಲ್ಲಿ 8 ಮಂದಿಗೆ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಸೂಡ ತಿಳಿಸಿದರು.

14 ಮಂದಿ ಗುಣಮುಖ: ರವಿವಾರ ಜಿಲ್ಲೆಯ 14 ಮಂದಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮುಕ್ತರಾದವರ ಒಟ್ಟು ಸಂಖ್ಯೆ ಈಗ 22,834ಕ್ಕೇರಿದೆ. ಸದ್ಯ 90 ಮಂದಿ ಕೊೀವಿಡ್‌ಗೆ ಸಕ್ರಿಯರಿದ್ದಾರೆ ಎಂದರು.

2104 ಮಂದಿ ನೆಗೆಟಿವ್: ರವಿವಾರ ಒಟ್ಟು 2110 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 2104 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಉಳಿದ 6 ಮಂದಿಯಲ್ಲಿ (ಐಸಿಎಂಆರ್ ವರದಿ) ಸೋಂಕು ಪತ್ತೆಯಾಗಿದೆ. ಈ ಮೂಲಕ ಇದುವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,113 ಆಗಿದೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ರವಿವಾರದವರೆಗೆ ಒಟ್ಟು 2,93,866 ಮಂದಿ ಕೋವಿಡ್ ಪರೀಕ್ಷೆ ಗೊಳಗಾಗಿದ್ದಾರೆ. ಇವರಲ್ಲಿ 2,70,753 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 23,113 ಮಂದಿ ಈವರೆಗೆ ಪಾಸಿಟಿವ್ ಬಂದಿದ್ದರೆ, 22,834 ಮಂದಿ ಚೇತರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News