ಕೇರಳದಲ್ಲಿ ಹಕ್ಕಿ ಜ್ವರದ ವೈರಸ್ ಪತ್ತೆ: 36,000 ಬಾತುಕೋಳಿಗಳ ಸಂಹಾರಕ್ಕೆ ನಿರ್ಧಾರ

Update: 2021-01-04 15:42 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ, ಜ.4: ಮಧ್ಯಪ್ರದೇಶ ಮತ್ತು ರಾಜಸ್ಥಾನದ ಬಳಿಕ ಕೇರಳದ ಅಳಪ್ಪುಝ ಮತ್ತು ಕೊಟ್ಟಾಯಂ ಜಿಲ್ಲೆಯಲ್ಲಿ ಹಕ್ಕಿಜ್ವರ ಕಂಡುಬಂದಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಜಿಲ್ಲಾಡಳಿತ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ ಎಂದು ವರದಿಯಾಗಿದೆ.

ಡಿಸೆಂಬರ್ ಅಂತ್ಯದಲ್ಲಿ ಎರಡೂ ಜಿಲ್ಲೆಗಳಲ್ಲಿ ಹಲವು ಬಾತುಕೋಳಿಗಳು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದವು. ಇದರಲ್ಲಿ 8 ಸ್ಯಾಂಪಲ್‌ಗಳನ್ನು ಭೋಪಾಲದ ಪ್ರಯೋಗಾಲಯಕ್ಕೆ ರವಾನಿಸಿದ್ದು 5ರಲ್ಲಿ ಎಚ್5ಎನ್8(ಹಕ್ಕಿಜ್ವರ)ದ ವೈರಸ್ ಪತ್ತೆಯಾಗಿದೆ. ಸೋಂಕು ಹರಡದಂತೆ ಸೋಂಕಿತ ಪ್ರದೇಶದ 1 ಕಿ.ಮೀ. ವ್ಯಾಪ್ತಿಯನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಈಗಾಗಲೇ 12,000ಕ್ಕೂ ಅಧಿಕ ಬಾತುಕೋಳಿಗಳು ಸತ್ತಿದ್ದು, 36,000 ಬಾತುಕೋಳಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೆಡುಮುಡಿ, ಪಳ್ಳಿಪ್ಪಾಡ್, ಥಕಳಿ ಮತ್ತು ಕರುವಟ್ಟ, ನೀಂಡೂರು ಪ್ರದೇಶದಲ್ಲಿ ಕಳೆದ ವಾರ 25,000ಕ್ಕೂ ಅಧಿಕ ಬಾತುಕೋಳಿಗಳು ಸತ್ತಿವೆ. ಹಕ್ಕಿಗಳ ಮೃತದೇಹದಿಂದ ಪಡೆದ ಸ್ಯಾಂಪಲ್‌ಗಳನ್ನು ತಿರುವನಂತಪುರಂನ ಇನ್‌ಸ್ಟಿಟ್ಯೂಟ್ ಆಫ್ ಎನಿಮಲ್ ಡಿಸೀಸ್ ಮತ್ತು ತಿರುವಲ್ಲದ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. ಪರೀಕ್ಷೆಯಲ್ಲಿ ಹಕ್ಕಿಜ್ವರದ ಲಕ್ಷಣ ಕಂಡುಬಂದಿಲ್ಲ. ಇದೇ ಮಾದರಿಯನ್ನು ಭೋಪಾಲದ ಪ್ರಯೋಗಾಲಯಕ್ಕೆ ಹೆಚ್ಚಿನ ಪರೀಕ್ಷೆಗಾಗಿ ರವಾನಿಸಿದ್ದು ಅಲ್ಲಿಯ ಪರೀಕ್ಷೆಯಲ್ಲಿ ಹಕ್ಕಿಜ್ವರದ ವೈರಸ್ ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಂಕು ಕಂಡುಬಂದ ಪ್ರದೇಶದ 1 ಕಿ.ಮೀ. ವ್ಯಾಪ್ತಿಯಲ್ಲಿರುವ ಬಾತುಕೋಳಿ, ಕೋಳಿ ಸೇರಿದಂತೆ ಇತರ ಹಕ್ಕಿಗಳನ್ನು ಸಂಹರಿಸುವ ಮೂಲಕ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗುವುದು. ಅಳಪುಝ ಮತ್ತು ಕೊಟ್ಟಾಯಂನಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ಕೇರಳ ಪಶುಸಂಗೋಪನಾ ಸಚಿವ ಕೆ. ರಾಜು ಹೇಳಿದ್ದಾರೆ. ವಲಸೆ ಹಕ್ಕಿಗಳ ಮೂಲಕ ಈ ವೈರಸ್ ರಾಜ್ಯವನ್ನು ಪ್ರವೇಶಿಸಿರುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಈ ಹಿಂದೆ ಕಾಣಿಸಿದ್ದ ಎಚ್5ಎನ್5 ಸೋಂಕಿಗೆ ಹೋಲಿಸಿದರೆ ಈಗ ಕಂಡುಬಂದಿರುವ ಎಚ್5ಎನ್8 ಸೋಂಕು ಅಷ್ಟೊಂದು ಅಪಾಯಕಾರಿಯಲ್ಲ. ಆದರೆ ಹಕ್ಕಿಗಳ ಮೂಲಕ ಮನುಷ್ಯರಿಗೆ, ಬಳಿಕ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆಯಿದೆ. ಇದು ಅಪಾಯಕಾರಿಯಾದ್ದರಿಂದ ಇಲಾಖೆಯು ನಿಯಂತ್ರಣಾ ಕೊಠಡಿಯನ್ನು ಆರಂಭಿಸಿದೆ ಮತ್ತು ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರಚಿಸಿದೆ ಎಂದು ಪಶುಸಂಗೋಪನಾ ಇಲಾಖೆಯ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಟಿಕೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News