ಪಾಕ್ ಪರ ಘೋಷಣೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಸ್ಲಿಂ ಲೀಗ್ ಆಗ್ರಹ
ಮಂಗಳೂರು, ಜ.4: ಗ್ರಾಪಂ ಚುನಾವಣೆಯ ವಿಜಯೋತ್ಸವಕ್ಕೆ ಸಂಬಂಧಿಸಿದಂತೆ ಉಜಿರೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಆಗ್ರಹಿಸಿದೆ.
ಕೆಲ ಸಂಘಿ ಮಾಧ್ಯಮಗಳು ಅದನ್ನು ಒಂದು ಸಮುದಾಯದ ಕೂಗಾಗಿ ಚಿತ್ರೀಕರಿಸಿದೆ. ಆದರೆ ಅಂತಹಾ ಕೂಗು ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಕೆಲವು ಮಾಧ್ಯಮಗಳು ಗಲಭೆಗೆ ಕುಮ್ಮಕ್ಕು ನೀಡುವಂತೆ ವರ್ತಿಸುತ್ತಿದೆ. ತನಿಖೆಗೆ ಮೊದಲೇ ನಿರ್ದಿಷ್ಟ ಸಮುದಾಯವನ್ನು ಎತ್ತಿಕಟ್ಟಿ ಯಾರನ್ನೋ ತೃಪ್ತಿಪಡಿಸಲು ಮಾಡುವ ತಂತ್ರವೇ ಎಂಬ ಅನುಮಾನದ ಜೊತೆಗೆ ಬಿಜೆಪಿ ಕಾರ್ಯಕರ್ತರ ಕಡೆಯಿಂದಲೂ ಘೋಷಣೆ ಕೂಗುವ ವೀಡಿಯೋ ವೈರಲಾಗುತ್ತಿದೆ. ಆದ್ದರಿಂದ ಮಾಧ್ಯಮದ ಮಂದಿಯನ್ನೇ ಕೂಲಂಕಷವಾಗಿ ತನಿಖೆ ನಡೆಸಿ ಸತ್ಯವನ್ನು ಜನರ ಮುಂದೆ ಇಡಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ತಬೂಕು ಅಬ್ದುಲ್ ರಹಿಮಾನ್ ದಾರಿಮಿ ಒತ್ತಾಯಿಸಿದ್ದಾರೆ.
ಅಮಾಯಕರ ಬಂಧನಕ್ಕೆ ಖಂಡನೆ
ಉಜಿರೆಯಲ್ಲಿ ಗ್ರಾಪಂ ಚುನಾವಣೆಯ ಫಲಿತಾಂಶದ ಎಸ್‌ಡಿಪಿಐ ವಿಜಯೋತ್ಸವದಲ್ಲಿ ಪಾಕಿಸ್ತಾನ ಪರ ಎಂದು ಘೋಷಣೆ ಕೂಗಿದ್ದಾರೆ ಎಂದು ಅರೋಪಿಸಿ ಅಮಾಯಕ ಯುವಕರನ್ನು ಪೊಲೀಸ್ ಇಲಾಖೆಯು ರಾಷ್ಟ್ರದ್ರೋಹದ ಅರೋಪದಡಿ ಬಂಧಿಸಿ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಿ ನೈಜ ಆರೋಪಿಗಳನ್ನು ಗುರುತಿಸಿ ಅವರ ಮೇಲೆ ಕಠಿಣ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.