×
Ad

ಉಡುಪಿ, ಜ.9ಕ್ಕೆ ಸಪ್ದರ್ ಹಾಶ್ಮಿ ಸಂಸ್ಮರಣೆ, ಸಂವಾದ

Update: 2021-01-04 21:52 IST

ಉಡುಪಿ, ಜ.4: ಬೀದಿ ನಾಟಕಗಳ ಹರಿಕಾರರೆನಿಸಿಕೊಂಡು, ಅದರ ಮೂಲಕ ವ್ಯವಸ್ಥೆಯನ್ನು ಪ್ರಶ್ನಿಸಿ, ನಾಡಿನ ಪಟ್ಟಭದ್ರರ ಕಂಗೆಣ್ಣಿಗೆ ಗುರಿಯಾಗಿ ಗೂಂಡಾಗಳಿಂದ ಬೀದಿಯಲ್ಲೇ ಭೀಕರವಾಗಿ ಕೊಲೆಯಾದ ಸಫ್ದರ್ ಹಾಕ್ಮಿ ಅವರ ನೆನಪುಗಳ ಕಾರ್ಯಕ್ರಮ ‘ಹಲ್ಲಾ ಬೋಲ್’ ಉಡುಪಿಯ ರಥಬೀದಿ ಗೆಳೆಯರು ಸಂಘಟನೆಯ ವತಿಯಿಂದ ಜ.9ರ ಶನಿವಾರ ಅಪರಾಹ್ನ 2:30ರಿಂದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ.

ಇಂದು ರಂಗ ಚಳುವಳಿ ಗಟ್ಟಿಯಾಗಿ ನೆಲೆವೂರಲು, ಅದರ ಆಳದಲ್ಲಿರುವ ಪ್ರತಿರೋಧದಿಂದ, ವ್ಯವಸ್ಥೆ ವಿರುದ್ಧದ ಧ್ವನಿಗಳಿಂದ ಅದು ಧಮನಿತರ, ಶೋಷಿತರ, ಕಾರ್ಮಿಕರ ಪರವಾದ ಗಟ್ಟಿ ದನಿಯಾದುದೇ ಕಾರಣ. ಇದಕ್ಕೆ ಮುಖ್ಯ ಕಾರಣಕರ್ತರಲ್ಲಿ ಒಬ್ಬರು ಕಲೆಯನ್ನು ಪ್ರತಿರೋಧದ ಮಾಧ್ಯಮ ವನ್ನಾಗಿಸಿದ ನಾಟಕಕಾರ, ಕವಿ, ನಟ, ಬೀದಿ ನಾಟಕಗಳ ಹರಿಕಾರ ಸಪ್ದರ್ ಹಾಶ್ಮಿ.

‘ಹಲ್ಲಾ ಬೋಲ್’ ಆತನ ಸಾವು ಮತ್ತು ಬದುಕಿನ ಕತೆ. ಈ ಕತೆಯನ್ನು ಹಿನ್ನಲೆ ಯಾಗಿರಿಸಿಕೊಂಡು ಸಂವಾದ ಕಾರ್ಯಕ್ರಮವನ್ನು ಉಡುಪಿಯ ಖ್ಯಾತ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಹಮ್ಮಿಕೊಂಡಿದೆ. ಈ ಸಂವಾದ ಕಾರ್ಯಕ್ರಮವನ್ನು ರಂಗನಟಿ, ಸಾಹಿತಿ ಡಾ.ಮಾಧವಿ ಎಸ್. ಭಂಡಾರಿ ಉದ್ಘಾಟಿಸುವರು. ಬೈಂದೂರಿನ ಶಿಕ್ಷಕ ರಾಘವೇಂದ್ರ ಕೆ. ಸಪ್ದರ್ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಲಿದ್ದಾರೆ.

ಬಳಿಕ ನಡೆಯುವ ಬೀದಿ ನಾಟಕಗಳ ಪರಂಪರೆ, ಪ್ರಯೋಗ ಮತ್ತು ಮೌಲಿಕತೆ ಸಂವಾದ ಕಾರ್ಯಕ್ರಮದಲ್ಲಿ ಮೋಹನ್‌ಚಂದ್ರ ಮಂಗಳೂರು, ಪ್ರಸಾದ್ ರಕ್ಷಿದಿ, ಐಕೆ ಬೊಳುವಾರು ವಿಷಯ ಮಂಡನೆ ಮಾಡಲಿದ್ದಾರೆ. ಸಮುದಾಯ ಕುಂದಾಪುರ ಅಧ್ಯಕ್ಷ ಉದಯ ಗಾಂವ್ಕರ್ ಸುನ್ವಯಕಾರ ರಾಗಿ ಭಾಗವಹಿಸಲಿದ್ದಾರೆ.

ಯುವ ರಂಗಕರ್ಮಿಗಳಾದ ಯೋಗೇಶ್ ಬಂಕೇಶ್ವರ, ಕ್ರಿಸ್ಟೋಫರ್ ಡಿಸೋಜ, ವಿದ್ಧು ಉಚ್ಚಿಲ, ವಿಘ್ನೇಶ್ ಹೊಳ್ಳ ತೆಕ್ಕಾರು, ಭುವನ್ ಮಣಿಪಾಲ, ಶಿಲ್ಪಾಶೆಟ್ಟಿ ಇವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಸಮುದಾಯ ಕುಂದಾಪುರದ ಸತ್ಯನಾ ಕೊಡೇರಿ, ವಾಸು ಗಂಗೇರ ಮತ್ತು ತಂಡ ಜನಮನದ ಹಾಡುಗಳನ್ನು ಹಾಡಲಿದ್ದಾರೆ. ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳಂತೆ ಈ ಕಾರ್ಯಕ್ರಮ ನಡೆಯಲಿದ್ದು, ಉಡುಪಿ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಡುಪಿ ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಮತ್ತು ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News