×
Ad

ದ.ಕ.ಜಿಲ್ಲೆ : ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಹೆಚ್ಚಳ

Update: 2021-01-04 22:13 IST

ಮಂಗಳೂರು, ಜ.4: ರಾಜ್ಯ ಸರಕಾರದ ಆದೇಶದಂತೆ ದ.ಕ.ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ (2020-21)ಶೈಕ್ಷಣಿಕ ವರ್ಷದ ಚಟುವಟಿಕೆಯು ಜ.1 (ಶುಕ್ರವಾರ) ಆರಂಭಗೊಂಡಿದ್ದರೂ ಕೂಡ ಅಂದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ. ಆದರೆ ಸೋಮವಾರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ.

ಎಸೆಸೆಲ್ಸಿ, ದ್ವಿತೀಯ ಪಿಯುಸಿಯ ರೆಗ್ಯುಲರಿ ತರಗತಿ ಮತ್ತು 6ರಿಂದ 9ನೆ ತರಗತಿವರೆಗೆ ವಿದ್ಯಾಗಮ ಆರಂಭಿಸಲು ಸರಕಾರ ಸೂಚಿಸಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಸರ್ವ ಸಿದ್ಧತೆ ನಡೆಸಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಧೈರ್ಯ ತುಂಬಿತ್ತು. ಅಲ್ಲದೆ ತರಗತಿಗಳ ಕೊಠಡಿ, ಶೌಚಾಲಯ, ಶಿಕ್ಷಕರ ಕೊಠಡಿ, ಮುಖ್ಯಶಿಕ್ಷಕರ ಮತ್ತು ಪ್ರಾಂಶುಪಾಲರ ಕೊಠಡಿಗಳ ಸ್ಯಾನಿಟೈಶೇನ್ ನಡೆಸಿತ್ತಲ್ಲದೆ ವಿದ್ಯಾರ್ಥಿಗಳನ್ನು ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕಾನಿಂಗ್ ಮಾಡಿಸಲಾಗುತ್ತಿದೆ.

ದ.ಕ.ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನ ರಹಿತ, ಸಿಬಿಎಸ್‌ಇ ಎಂದೆಲ್ಲಾ 1505 ಪ್ರಾಥಮಿಕ ಮತ್ತು 585 ಪ್ರೌಢ ಸಹಿತ 2090 ಶಾಲೆಗಳ ಪೈಕಿ 6ರಿಂದ 10ರವರೆಗೆ ಸುಮಾರು 2.10 ಲಕ್ಷ ಮಕ್ಕಳು ಕಲಿಯುತ್ತಿದ್ದು, ಆ ಪೈಕಿ ಸೋಮವಾರ ಶೇ.70ಕ್ಕೂ ಅಧಿಕ ವಿದ್ಯಾರ್ಥಿ ಗಳು ಹಾಜರಾಗಿದ್ದಾರೆ. ಸೋಮವಾರ ಎಸೆಸೆಲ್ಸಿಯ ಶೇ.74 ಮಕ್ಕಳು ಹಾಜರಾಗಿದ್ದಾರೆ.

ಅದಲ್ಲದೆ ಸರಕಾರಿ 53, ಅನುದಾನಿತ 51, ಅನುದಾನ ರಹಿತ 106 ಎಂದೆಲ್ಲಾ 210 ಪಿಯು ಕಾಲೇಜುಗಳಿವೆ. ದ್ವಿತೀಯ ಪಿಯುಸಿಯಲ್ಲಿ 33 ಸಾವಿರ ಮಕ್ಕಳ ಪೈಕಿ 28,766 ಮಕ್ಕಳು ಸೋಮವಾರ ಹಾಜರಾಗುವ ಮೂಲಕ ಶೇ.72 ಪ್ರಗತಿ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News