‘ಬೈಡನ್ ಸೋಲಿಸಲು ಸಾಕಷ್ಟು ಮತ ಬರುವಂತೆ ನೋಡಿಕೊಳ್ಳಿ’

Update: 2021-01-04 17:19 GMT

ವಾಶಿಂಗ್ಟನ್, ಜ. 4: ಮಂಗಳವಾರ ಸೆನೆಟ್‌ಗೆ ನಡೆಯಲಿರುವ ಉಪಚುನಾವಣೆಯಲ್ಲಿ, ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಜಾರ್ಜಿಯ ರಾಜ್ಯದಲ್ಲಿ ಗಳಿಸಿರುವ ವಿಜಯವನ್ನು ಬುಡಮೇಲುಗೊಳಿಸಲು ಸಾಕಾಗುವಷ್ಟು ಮತಗಳನ್ನು ಪಡೆದುಕೊಳ್ಳುವಂತೆ ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರ್ಜಿಯದ ಹಿರಿಯ ಅಧಿಕಾರಿ ಬ್ರಾಡ್ ರ್ಯಾಫನ್‌ಸ್ಪರ್ಜರ್‌ಗೆ ಸೂಚನೆ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಟ್ರಂಪ್ ಶನಿವಾರ ತನ್ನದೇ ರಿಪಬ್ಲಿಕನ್ ಪಕ್ಷದ ಬ್ರಾಡ್ ಜೊತೆಗೆ ಸುಮಾರು ಒಂದು ಗಂಟೆ ಫೋನ್‌ನಲ್ಲಿ ಮಾತನಾಡಿ ಅವರ ಮೇಲೆ ಅಗಾಧ ಒತ್ತಡ ಹೇರಿದ್ದಾರೆ ಎಂದು ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆ ರವಿವಾರ ವರದಿ ಮಾಡಿವೆ.

ತನ್ನ ಸೂಚನೆಯನ್ನು ಪಾಲಿಸಲು ವಿಫಲರಾದರೆ ಬ್ರಾಡ್ ಮತ್ತು ಜಾರ್ಜಿಯದ ಇನ್ನೋರ್ವ ಅಧಿಕಾರಿ ‘ದೊಡ್ಡ ಅಪಾಯ’ವನ್ನು ಎದುರಿಸಬೇಕಾಗಬಹುದು ಎಂಬ ಬೆದರಿಕೆಯನ್ನೂ ಟ್ರಂಪ್ ಒಡ್ಡಿರುವುದು ಸಂಭಾಷಣೆಯ ರಹಸ್ಯ ಟೇಪ್‌ನಲ್ಲಿ ಬಹಿರಂಗವಾಗಿದೆ.

‘‘ಜಾರ್ಜಿಯದ ಜನರು ಕೋಪಗೊಂಡಿದ್ದಾರೆ, ದೇಶದ ಜನರು ಕೋಪಗೊಂಡಿದ್ದಾರೆ’’ ಎಂಬುದಾಗಿ ಟ್ರಂಪ್ ಹೇಳುವುದು ಟೇಪ್‌ನಲ್ಲಿ ಕೇಳುತ್ತದೆ. ಮೊನ್ನೆ (ನವೆಂಬರ್ 3ರಂದು) ನಡೆದ ಚುನಾವಣೆಯಲ್ಲಿ ನೀವು ಲಕ್ಷಾಂತರ ಮತಗಳನ್ನು ಕಳೆದುಕೊಂಡಿದ್ದೀರಿ ಎಂದು ಟ್ರಂಪ್ ಹೇಳಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಬ್ರಾಡ್, ‘‘ಅಧ್ಯಕ್ಷರೇ, ನೀವು ಹೊಂದಿರುವ ಮಾಹಿತಿ ತಪ್ಪು’’ ಎಂದು ಹೇಳುತ್ತಾರೆ.

 ರಿಪಬ್ಲಿಕನ್ ಪಕ್ಷದ ಭದ್ರಕೋಟೆಯಾಗಿದ್ದ ಜಾರ್ಜಿಯವನ್ನು ನವೆಂಬರ್ 3ರ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಅಭ್ಯರ್ಥಿ ಬೈಡನ್ 12,000ಕ್ಕೂ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಹಲವಾರು ಸುತ್ತುಗಳ ಮರುಎಣಿಕೆಗಳು ಮತ್ತು ಲೆಕ್ಕಪರಿಶೋಧನೆಗಳ ಬಳಿಕವೂ ಈ ಫಲಿತಾಂಶ ಬದಲಾಗಿಲ್ಲ. ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಟ್ರಂಪ್ ಆರೋಪವು ಸಾಬೀತಾಗಿಲ್ಲ.

ಒಂದು ವೇಳೆ, ಮಂಗಳವಾರ ನಡೆಯಲಿರುವ ಚುನಾವಣೆಯಲ್ಲಿ ಜಾರ್ಜಿಯ ರಾಜ್ಯ ಬೈಡನ್ ಕೈತಪ್ಪಿದರೂ, ಅವರ ಒಟ್ಟಾರೆ ವಿಜಯದ ಮೇಲೆ ಆ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ.

ಹತಾಶೆ ಪ್ರದರ್ಶನ: ಕಮಲಾ ಹ್ಯಾರಿಸ್

ಜಾರ್ಜಿಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ತನ್ನ ಪರವಾಗಿ ಸಾಕಷ್ಟು ಮತಗಳು ಚಲಾವಣೆಯಾಗುವಂತೆ ನೋಡಿಕೊಳ್ಳಿ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜ್ಯದ ಅಧಿಕಾರಿಯೊಬ್ಬರ ಮೇಲೆ ಒತ್ತಡ ಹೇರಿರುವುದನ್ನು ನಿಯೋಜಿತ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಹಾಗೂ ಡೆಮಾಕ್ರಟಿಕ್ ಪಕ್ಷದ ಇತರ ಉನ್ನತ ನಾಯಕರು ಖಂಡಿಸಿದ್ದಾರೆ.

‘‘ಇದು ಖಂಡಿತವಾಗಿಯೂ ಟ್ರಂಪ್‌ರ ಹತಾಶೆಯನ್ನು ತೋರಿಸುತ್ತದೆ’’ ಎಂದು ಕಮಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News