ಕುವೈತ್; ಶಿವಮೊಗ್ಗ ಮೂಲದ ಕಾರ್ಮಿಕ ಶಂಕಾಸ್ಪದ ಸಾವು: ಆರೋಪ

Update: 2021-01-05 17:10 GMT

ಕುವೈತ್/ಮಂಗಳೂರು, ಜ.5: ಶಿವಮೊಗ್ಗ ಮೂಲದ ಕಾರ್ಮಿಕ ಹಾಸಿಂ ಫರೀದ್‌ ಸಾಬ್ ಕುವೈತ್‌ನಲ್ಲಿ ಮೃತಪಟ್ಟಿದ್ದಾರೆ. ‘ಇದು ಅನುಮಾನಾಸ್ಪದ ಸಾವು’ ಎಂದು ಆರೋಪಿಸಿರುವ ಮೃತನ ಕುಟುಂಬಸ್ಥರು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಮೃತದೇಹವನ್ನು ಸ್ವದೇಶಕ್ಕೆ ಮರಳಿಸುವುದು ಹಾಗೂ ಸಾವು ಪ್ರಕರಣವನ್ನು ಕೂಡಲೇ ತನಿಖೆ ನಡೆಸಲು ಒತ್ತಾಯಿಸಿ ಮೃತನ ಕುಟುಂಬಸ್ಥರು ಸಾಗರದ ಗ್ರಾಮಾಂತರ ಠಾಣೆಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ- ರಾಜ್ಯ ಸರಕಾರದ ಒಳಾಡಳಿತ ಇಲಾಖೆಯ ಅಪರ ಕಾರ್ಯದರ್ಶಿ (ಕಾನೂನು-ಸುವ್ಯವಸ್ಥೆ) ಮೂಲಕ ಕುವೈತ್‌ನ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ರವಾನಿಸಿದ್ದಾರೆ. ಆದರೆ ಈ ಮನವಿಯು ಇಲ್ಲಿಯವರೆಗೆ ಅಪರ ಕಾರ್ಯದರ್ಶಿ ಕಚೇರಿಗೆ ತಲುಪಿಲ್ಲ ಎಂಬ ಆರೋಪ ಕೇಳಿಬಂದಿದೆ.

ಏನಿದು ಕಾರ್ಮಿಕನ ಸಾವು?: ಕುವೈತ್ ‌ನ ಮಹಬೂಲ ಪ್ರದೇಶದಲ್ಲಿ ಕರ್ನಾಟಕ ರಾಜ್ಯದ ಸಾಗರ ತಾಲೂಕಿನ ತಾಳಗೊಪ್ಪ ನಿವಾಸಿ ಹಾಸಿಂ ಫರೀದ್‌ ಸಾಬ್ 2020ರ ಡಿ.25ರಂದು ಮೃತಪಟ್ಟಿದ್ದಾರೆ. ‘ಕಾರ್ಮಿಕ ಹಾಸಿಂ ಅವರು ಈಜಲು ಸಮುದ್ರಕ್ಕೆ ತೆರಳಿದಾಗ, ನೀರಲ್ಲಿ ಮುಳುಗಿ ಆಕಸ್ಮಿಕವಾಗಿ ಮರಣ ಹೊಂದಿದ್ದಾರೆ’ ಎಂಬ ಮಾಹಿತಿಯು ಅದೇ ಕಂಪೆನಿಯ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹರಿದಾಡಿತ್ತು.

ಇನ್ನೊಂದೆಡೆ, ಹಾಸಿಂ ಮೃತಪಟ್ಟ ದಿನವೇ ಕಂಪೆನಿಯ ಅಧಿಕಾರಿಯೊಬ್ಬರು ಕುಟುಂಬದ ಸಂಬಂಧಿಕರೊಬ್ಬರಿಗೆ ಕರೆ ಮಾಡಿ, ‘ಹಾಸಿಂ ನೀರಿಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ’ ಎಂಬ ಮಾಹಿತಿ ರವಾನಿಸಿದ್ದರು. ಬಳಿಕ ಇದನ್ನು ಸಂಬಂಧಿಕರು ಕುವೈತ್‌ನಲ್ಲಿರುವ ಹಾಸಿಂನ ಸ್ನೇಹಿತರ ಗಮನಕ್ಕೆ ತಂದಿದ್ದರು. ಆತನ ಸ್ನೇಹಿತರು ಹಾಸಿಂ ತಂಗಿದ್ದ ಕೊಠಡಿಯನ್ನು ಪರಿಶೀಲಿಸಿದಾಗ, ಮಲಗುವ ಹಾಸಿಗೆಯ ಮೇಲೆ ರಕ್ತದ ಕಲೆಗಳು ಇರುವುದನ್ನು ಬೆಳಕಿಗೆ ಬಂದಿದೆ. ಪ್ರಕರಣ ತಿರುವು ಪಡೆಯುವ ಎಲ್ಲ ಲಕ್ಷಣ ಕಂಡುಬಂದ ತಕ್ಷಣವೇ ಹಾಸಿಂ ಸ್ನೇಹಿತರು ‘ಅವರ ಸಾವು ಸಂಶಯಾಸ್ಪದ’ ಎಂದು ಆತನ ಸಂಬಂಧಿಗಳ ಗಮನಕ್ಕೆ ತಂದಿದ್ದಾರೆ.

ಮೃತನ ಕುಟುಂಬವು ಡಿ.28ರಂದು ಕುವೈಟ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಮೃತ ಶರೀರವನ್ನು ಊರಿಗೆ ಕಳಿಸುವಂತೆ ಇಮೇಲ್ ಮೂಲಕ ಮನವಿ ಮಾಡಿದೆ. ಅದೇ ರೀತಿ, ಮರುದಿನ (ಡಿ.29) ಊರಿನಲ್ಲಿರುವ ಕುಟುಂಬಸ್ಥರು ಸಾಗರದ ಗ್ರಾಮಾಂತರ ಪೊಲೀಸ್ ಠಾಣೆ ಮೂಲಕ ಶಿವಮೊಗ್ಗ ಜಿಲ್ಲಾಡಳಿತ, ಕರ್ನಾಟಕ ಸರಕಾರದ ಅಪರ ಕಾರ್ಯದರ್ಶಿಗೆ ಕಾರ್ಮಿಕನ ಸಾವಿನ ಬಗ್ಗೆ ಸಂಶಯವಿದ್ದು, ಕುವೈತ್‌ನಲ್ಲಿಯೇ ಅದರ ತನಿಖೆ ನಡೆಸಲು ಕುವೈತ್‌ನ ಭಾರತದ ರಾಯಭಾರಿ ಕಚೇರಿಗೆ ಮನವಿ ಮಾಡಲು ಪತ್ರದ ಮೂಲಕ ಕೇಳಿಕೊಂಡಿದೆ ಎಂದು ತಿಳಿದುಬಂದಿದೆ.

ಜ.4ರಂದು ಕುಟುಂಬಸ್ಥರು ರಾಜ್ಯ ಸರಕಾರದ ಅಪರ ಕಾರ್ಯದರ್ಶಿ ಕಚೇರಿಗೆ ಸ್ವತಃ ತೆರಳಿ ಮನವಿಯ ಕುರಿತು ಅನ್ವೇಷಿಸಿದಾಗ ಅಲ್ಲಿಗೆ ಮನವಿಯು ತಲುಪಿಲ್ಲ ಎಂಬ ಮಾಹಿತಿ ಲಭಿಸಿದೆ. ಈ ಮನವಿ ಇಲ್ಲದೇ ಕರ್ನಾಟಕ ಸರಕಾರದಿಂದ ಮುಂದಿನ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಮುಂದಿನ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿ ದ್ದಾರೆ. ಈ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕರ್ನಾಟಕ ಸರಕಾರ ಮತ್ತು ಭಾರತ ಸರಕಾರದ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎನ್ನುವುದು ಕುಟುಂಬಸ್ಥರ ಅಳಲು.

ಕುವೈತ್‌ನಲ್ಲಿ ಮೃತಪಟ್ಟ ಕಾರ್ಮಿಕನ ಶವವನ್ನು ತವರಿಗೆ ರವಾನಿಸುವ ಪ್ರಕ್ರಿಯೆ ನಡೆದಿದೆ. ಈ ನಡುವೆ ಮೃತ ಕಾರ್ಮಿಕನ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ‘ಹೃದಯಾಘಾತದಿಂದ ಕಾರ್ಮಿಕ ಮೃತಪಟ್ಟಿದ್ದಾನೆ’ ಎಂಬುದಾಗಿ ಕುವೈತ್‌ನ ಭಾರತೀಯ ರಾಯಭಾರಿ ಕಚೇರಿಯ ಸ್ಥಳೀಯ ಪ್ರಾಧಿಕಾರವು ವರದಿಯಲ್ಲಿ ಉಲ್ಲೇಖಿಸಿದೆ ಎಂದು ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್‌ನ ಕರ್ನಾಟಕ ವಿಭಾಗದ ಮಾಬಿಯ ಆದಮ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News