ಯುನಿವೆಫ್ ಕರ್ನಾಟಕ : ಉಳ್ಳಾಲದಲ್ಲಿ ಸೀರತ್ ಸಮಾವೇಶ

Update: 2021-01-05 16:56 GMT

ಮಂಗಳೂರು : "ಸಾಮಾಜಿಕ ತಾರತಮ್ಯ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಯುನಿವೆಫ್ ಕರ್ನಾಟಕ" ದ ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ  ಉಳ್ಳಾಲ ಶಾಖೆಯ ವತಿಯಿಂದ ಉಳ್ಳಾಲ ನಗರಸಭಾ ಮೈದಾನದಲ್ಲಿ ಸೀರತ್ ಸಮಾವೇಶ ಶುಕ್ರವಾರ ನಡೆಯಿತು.

"ಭಾರತದಲ್ಲಿ ಇಸ್ಲಾಮ್ ಮತ್ತು ಪ್ರವಾದಿ(ಸ)" ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ, "ಮುಸ್ಲಿಮರು ದೇವ ಧರ್ಮಕ್ಕೆ ಸ್ವಯಂ ಸಾಕ್ಷಿಗಳಾಗಿದ್ದಾರೆ ಹಾಗೂ ಸುವಾರ್ತೆ ನೀಡುವವರೂ, ಎಚ್ಚರಿಸುವವರೂ ಆಗಿದ್ದಾರೆ. ಒಳಿತನ್ನು ಆಜ್ಞಾಪಿಸಿ ಕೆಡುಕನ್ನು ವಿರೋಧಿಸುವ ತನ್ನ ದೌತ್ಯವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಮುಸ್ಲಿಮನ ಮೇಲಿದೆ. ಆದರೆ ಇಂದು ಮುಸ್ಲಿಮ್ ಸಮುದಾಯ ಆಡಂಬರದಲ್ಲಿ ಮತ್ತು ದುಂದಾವರ್ತಿಯಲ್ಲಿ ಸ್ಪರ್ಧೆ ನಡೆಸುತ್ತಿದೆ. ಇದು ನಮ್ಮನ್ನು ಅಧೋಗತಿಯತ್ತ ಕೊಂಡೊಯ್ಯುತ್ತಿದೆ." ಎಂದು ಹೇಳಿದರು. ಭಾರತದ ಪ್ರಸಕ್ತ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು "ಪ್ರವಾದಿಯವರ ಬೋಧನೆಗಳಲ್ಲಿ ರೈತರ ಸಮಸ್ಯೆಗಳಿಗೂ ಪರಿಹಾರವಿದೆ. ಮಾನವ ಬದುಕಿನ ಯಾವ ರಂಗವೂ ಅವರ ಬೋಧನೆಗಳಿಂದ ವಂಚಿತವಾಗಿಲ್ಲ" ಎಂದು ಹೇಳಿದರು.

ಉಳ್ಳಾಲ ನಗರಸಭೆಯ ಉಪಾಧ್ಯಕ್ಷ ಯು.ಪಿ. ಅಯ್ಯೂಬ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಉಳ್ಳಾಲ ಶಾಖಾಧ್ಯಕ್ಷ ಅಬ್ದುಶ್ಶುಕೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ತಾರ್ ಅಹ್ಮದ್ ಕಿರ್ ಅತ್ ಪಠಿಸಿದರು. ಕಾರ್ಯಕ್ರಮ ಸಂಚಾಲಕ ಫಝಲ್ ಮುಹಮ್ಮದ್  ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸಹಸಂಚಾಲಕ ಅತೀಖುರ್‍ರಹ್ಮಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News