2 ವಾರಗಳಲ್ಲಿ ದೇವಸ್ಥಾನ ಮರುನಿರ್ಮಿಸಿ: ಸರಕಾರಕ್ಕೆ ಪಾಕ್ ಸುಪ್ರೀಂ ಕೋರ್ಟ್ ಆದೇಶ

Update: 2021-01-05 18:02 GMT

ಇಸ್ಲಾಮಾಬಾದ್ (ಪಾಕಿಸ್ತಾನ), ಜ. 5: ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವ ರಾಜ್ಯದ ಕರಕ್ ಜಿಲ್ಲೆಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಧ್ವಂಸಗೊಂಡ ಹಿಂದೂ ದೇವಾಲಯವನ್ನು ಎರಡು ವಾರಗಳಲ್ಲಿ ಮರುನಿರ್ಮಿಸುವಂತೆ ದೇಶದ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಅದೇ ವೇಳೆ, ದೇವಸ್ಥಾನ ಮರುನಿರ್ಮಾಣದ ವೆಚ್ಚವನ್ನು ಅದನ್ನು ಧ್ವಂಸಗೊಳಿಸಿದವರೇ ಭರಿಸಬೇಕು ಎಂಬುದಾಗಿಯೂ ನ್ಯಾಯಾಲಯ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಗುಲ್ಝಾರ್ ಅಹಮ್ಮದ್, ಈ ಘಟನೆಯು ಪಾಕಿಸ್ತಾನವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡು ಮಾಡಿದೆ ಎಂದು ಅಭಿಪ್ರಾಯಪಟ್ಟರು ಎಂದು ‘ಡಾನ್’ ಹೇಳಿದೆ.

ನ್ಯಾಯಮೂರ್ತಿ ಗುಲ್ಝಾರ್ ಅಹಮ್ಮದ್ ದೇವಸ್ಥಾನ ಧ್ವಂಸ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದ್ದರು ಹಾಗೂ ಸ್ಥಳಕ್ಕೆ ಭೇಟಿ ನೀಡಿ ಜನವರಿ 4ರ ಒಳಗೆ ಸಮಗ್ರ ವರದಿಯೊಂದನ್ನು ನೀಡುವಂತೆ ಖೈಬರ್ ಪಖ್ತೂನ್‌ಖ್ವ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದ ಮುಖ್ಯಸ್ಥ ಶುಐಬ್‌ಗೆ ಸೂಚಿಸಿದ್ದರು.

ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಶುಐಬ್ ಶಿಫಾರಸು ಮಾಡಿದ್ದಾರೆ ಹಾಗೂ ದೇವಸ್ಥಾನದ ಒಳಗೆ ಶಂಕಿತ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಲು ಗೃಹ ಇಲಾಖೆಯು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿಯೂ ಅವರು ಸೂಚಿಸಿದ್ದಾರೆ.

ಅದೂ ಅಲ್ಲದೆ, ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News