ದ. ಕೊರಿಯದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಇರಾನ್

Update: 2021-01-05 17:11 GMT

ಟೆಹರಾನ್ (ಇರಾನ್), ಜ. 5: ‘ಪರಿಸರ ಕಾನೂನುಗಳನ್ನು ಉಲ್ಲಂಘಿಸಿರುವುದಕ್ಕಾಗಿ’ ದಕ್ಷಿಣ ಕೊರಿಯದ ತೈಲ ಟ್ಯಾಂಕರೊಂದನ್ನು ತನ್ನ ರೆವಲೂಶನರಿ ಗಾರ್ಡ್ಸ್ ಪಡೆಯು ಕೊಲ್ಲಿ ಜಲಪ್ರದೇಶದಲ್ಲಿ ವಶಪಡಿಸಿಕೊಂಡಿರುವುದಾಗಿ ಇರಾನ್ ಸೋಮವಾರ ತಿಳಿಸಿದೆ.

ಅಮೆರಿಕದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

‘‘ನಮ್ಮ ಪಡೆಯ ನೌಕಾ ವಿಭಾಗವು ಇಂದು ಬೆಳಗ್ಗೆ 7,200 ಟನ್ ತೈಲ ರಾಸಾಯನಿಕ ಉತ್ಪನ್ನಗಳನ್ನು ಒಯ್ಯುತ್ತಿದ್ದ್ ‘ಎಂಟಿ ಹಾನ್‌ಕುಕ್ ಕೆಮಿ’ ಟ್ಯಾಂಕರನ್ನು ಆಯಕಟ್ಟಿನ ಹೋರ್ಮುಝ್ ಜಲಸಂಧಿಯ ಬಳಿ ವಶಪಡಿಸಿಕೊಂಡಿದೆ’’ ಎಂದು ಗಾರ್ಡ್ಸ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

‘‘ಈ ಟ್ಯಾಂಕರ್ ಸೌದಿ ಅರೇಬಿಯದ ಅಲ್ ಜುಬೈಲ್ ಬಂದರಿನಿಂದ ಬರುತ್ತಿತ್ತು. ಸಮುದ್ರ ಪರಿಸರ ಕಾನೂನುಗಳನ್ನು ಪದೇ ಪದೇ ಉಲ್ಲಂಘಿಸಿರುವುದಕ್ಕಾಗಿ ಅದನ್ನು ವಶಪಡಿಸಿಕೊಳ್ಳಲಾಗಿದೆ’’ ಎಂದು ಅದು ತಿಳಿಸಿದೆ.

ಇರಾನ್ ಸೇನಾಧಿಕಾರಿ ಖಾಸಿಮ್ ಸುಲೈಮಾನಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಹತ್ಯೆಗೀಡಾದ ವಾರ್ಷಿಕ ದಿನದ ಒಂದು ದಿನದ ಬಳಿಕ ಇರಾನ್ ಈ ಕ್ರಮಕ್ಕೆ ಮುಂದಾಗಿದೆ.

ಟ್ಯಾಂಕರ್‌ನ 20 ಸಿಬ್ಬಂದಿ ದಕ್ಷಿಣ ಕೊರಿಯ, ಇಂಡೋನೇಶ್ಯ, ವಿಯೆಟ್ನಾಮ್ ಮತ್ತು ಮ್ಯಾನ್ಮಾರ್ ರಾಷ್ಟ್ರೀಯರಾಗಿದ್ದು, ಅವರನ್ನು ಇರಾನ್ ವಶಕ್ಕೆ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News