ಕಾಸರಗೋಡು; ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆ ಪ್ರಕರಣ: ಮಹಿಳೆ ಸೆರೆ

Update: 2021-01-06 04:46 GMT

ಕಾಸರಗೋಡು : ಒಂದೂವರೆ ವರ್ಷದ ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಾಗಿರುವ ತಾಯಿಯನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೆರ್ಲತ್ತಡ್ಕದ ಶಾರದಾ (25) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ.4ರಂದು ಈಕೆಯ ಪುತ್ರ ಸ್ವಸ್ತಿಕ್ ನ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿತ್ತು. ಪತಿ ಬಾಬು ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿತ್ತು. ಮಗು ನಾಪತ್ತೆಯಾದುದರಿಂದ ಪರಿಸರವಾಸಿಗಳು ಶೋಧ ನಡೆಸಿದಾಗ ಮನೆಯ ಅಲ್ಪ ದೂರದ ಪಾಳು ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ಮೃತದೇಹವನ್ನು ಕಣ್ಣೂರು  ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮಗುವನ್ನು ಬಾವಿಗೆಸೆದು ಕೊಲೆಗೈದಿರುವುದಾಗಿ ಸಾಬೀತಾಗಿತ್ತು. ಪುತ್ತೂರಿನಲ್ಲಿರುವ ತಾಯಿ ಮನೆಗೆ ತೆರಳಿದ್ದ ಶಾರದಾ ಳನ್ನು ಬದಿಯಡ್ಕ ಠಾಣೆ ಪೊಲೀಸರು   ವಿಚಾರಣೆಗೊಳಪಡಿಸಿದ್ದು, ಈ ಸಂದರ್ಭ ಮಗುವನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ವಿಚಾರಣೆ ವೇಳೆ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ ಮಗು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿ ಸಂಶಯ ವ್ಯಕ್ತಪಡಿಸಿದ್ದರೂ ಮರಣೋತ್ತರ ಪರೀಕ್ಷೆಯಿಂದ ಕೊಲೆ ಎಂದು ಬೆಳಕಿಗೆ ಬಂದಿತ್ತು. ಶಾರದಾ ಮಾನಸಿಕ ಅಸ್ವಸ್ಥತೆಯಂತೆ ವರ್ತಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.  ಆರೋಪಿಯನ್ನು ಕಾಸರಗೋಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು , 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News