ಭಾರತ-ಆಸ್ಟ್ರೇಲಿಯ ಸಿಡ್ನಿ ಟೆಸ್ಟ್ ಗೆ ಪ್ರೇಕ್ಷಕರು ಮಾಸ್ಕ್ ಧರಿಸುವುದು ಕಡ್ಡಾಯ
Update: 2021-01-06 11:11 IST
ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯ ಹಾಗೂ ಭಾರತ ನಡುವೆ ನಡೆಯಲಿರುವ ಮೂರನೇ ಟೆಸ್ಟ್ ನ ವೇಳೆ ಹಾಜರಾಗಲಿರುವ ಕ್ರಿಕೆಟ್ ಅಭಿಮಾನಿಗಳು ತಿನ್ನುವಾಗ ಅಥವಾ ಕುಡಿಯುವಾಗ ಹೊರತುಪಡಿಸಿ ಬೇರೆಲ್ಲಾ ಸಮಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ನ್ಯೂ ಸೌತ್ ವೇಲ್ಸ್ ನ ಆರೋಗ್ಯ ಸಚಿವ ಬ್ರಾಡ್ ಹಝಾರ್ಡ್ ಬುಧವಾರ ತಿಳಿಸಿದ್ದಾರೆ.
ಐದು ದಿನಗಳ ಪಂದ್ಯವು ಗುರುವಾರ ಆರಂಭವಾಗಲಿದ್ದು, 48,000 ಸಾಮರ್ಥ್ಯದ ಸ್ಟೇಡಿಯಂನಲ್ಲಿ ಸುಮಾರು 10,000 ಪ್ರೇಕ್ಷಕರಿಗೆ ಸುರಕ್ಷಿತ ಅಂತರದೊಂದಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗಿದೆ. ಆಸ್ಟ್ರೇಲಿಯದ ದೊಡ್ಡ ನಗರ ಸಿಡ್ನಿಯಲ್ಲಿ ಕೋವಿಡ್-19 ಸೋಂಕು ಮತ್ತೆ ಕಾಣಿಸಿಕೊಂಡಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.