ವಿಲಿಯಮ್ಸನ್ ನಾಲ್ಕನೇ ದ್ವಿಶತಕ

Update: 2021-01-06 06:25 GMT

ವೆಲ್ಲಿಂಗ್ಟನ್,ಜ.5: ಪಾಕಿಸ್ತಾನ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ನಾಯಕ ಕೇನ್ ವಿಲಿಯಮ್ಸನ್ ತಮ್ಮ ನಾಲ್ಕನೇ ದ್ವಿಶತಕ , ಹೆನ್ರಿ ನಿಕೋಲ್ಸ್ ಮತ್ತು ಡ್ಯಾರಿಲ್ ಮಿಚೆಲ್ ಶತಕಗಳ ನೆರವಿನಲ್ಲಿ ನ್ಯೂಝಿಲ್ಯಾಂಡ್ ಬೃಹತ್ ಮೊತ್ತ ದಾಖಲಿಸಿದೆ.

 ಪಾಕಿಸ್ತಾನ ವಿರುದ್ಧ ನ್ಯೂಝಿಲ್ಯಾಂಡ್ 362 ರನ್‌ಗಳ ಮೊದಲ ಇನಿಂಗ್ಸ್ ಸಾಧಿಸಿದೆ. ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್‌ನಲ್ಲಿ 158,5 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 659 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಎರಡನೇ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಮೂರನೇ ದಿನದಾಟದಂತ್ಯಕ್ಕೆ 11 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 8 ರನ್ ಗಳಿಸಿದೆ. ಇನಿಂಗ್ಸ್ ಸೋಲು ತಪ್ಪಿಸಲು ಇನ್ನೂ 354 ರನ್ ಗಳಿಸಬೇಕಾಗಿದೆ.

ಪಾಕ್‌ನ ಆರಂಭಿಕ ಬ್ಯಾಟ್ಸ್‌ಮನ್ ಶಾನ್ ಮಸೂದ್ (0) ಔಟಾಗಿದ್ದಾರೆ. ಅಬಿದ್ ಅಲಿ (ಔಟಾಗದೆ 7) ಮತ್ತು ಮುಹಮ್ಮದ್ ಅಬ್ಬಾಸ್ (ಔಟಾಗದೆ 1) ಬ್ಯಾಟಿಂಗ್‌ನ್ನು ಅಂತಿಮ ದಿನಕ್ಕೆ ಕಾಯ್ದಿರಿಸಿದ್ದಾರೆ.

        

   ಟೆಸ್ಟ್‌ನ ಎರಡನೇ ದಿನದಾಟದಂತ್ಯಕ್ಕೆ ನ್ಯೂಝಿಲ್ಯಾಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 85 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 286 ರನ್ ಗಳಿಸಿತ್ತು. ಸೋಮವಾರ ಔಟಾಗದೆ 112 (175ಎ, 16ಬೌ) ರನ್ ಗಳಿಸಿದ್ದ ವಿಲಿಯಮ್ಸನ್ ಮತ್ತು ಔಟಾಗದೆ 89 ರನ್ (186ಎ, 8ಬೌ) ಗಳಿಸಿದ್ದ ನಿಕೋಲ್ಸ್ ಬ್ಯಾಟಿಂಗ್ ಮುಂದುವರಿಸಿ ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಪುಡಿ ಪುಡಿ ಮಾಡಿದರು. 83ನೇ ಟೆಸ್ಟ್ ಆಡುತ್ತಿರುವ ವಿಲಿಯಮ್ಸನ್ ನಿನ್ನೆ 24ನೇ ಶತಕ ದಾಖಲಿಸಿದ್ದರು. ಅವರು ಮಂಗಳವಾರ ನಾಲ್ಕನೇ ದ್ವಿಶತಕ ದಾಖಲಿಸಿದರು. ನಿಕೋಲ್ಸ್ 7ನೇ ಶತಕ ದಾಖಲಿಸಿದರು. ವಿಲಿಯಮ್ಸನ್ 238 ರನ್ (364ಎ, 28ಬೌ) ಗಳಿಸಿದರು . ವಿಲಿಯಮ್ಸನ್ ಮತ್ತು ನಿಕೋಲ್ಸ್ ಮ್ಯಾರಥಾನ್ 369 ರನ್‌ಗಳ ಜೊತೆಯಾಟ ನೀಡಿದರು. ಇದು ನಾಲ್ಕನೇ ವಿಕೆಟ್‌ಗೆ ನೂಝಿಲ್ಯಾಂಡ್‌ನ ದಾಖಲೆಯಾಗಿದೆ. ನಿಕೋಲ್ಸ್ 157 (291ಎ, 18ಬೌ,1ಸಿ) ಗಳಿಸಿದರು.

  

   ವಾಟ್ಲಿಂಗ್ (7) ವಿಫಲರಾದರು. ಇನಿಂಗ್ಸ್ ಡಿಕ್ಲೇರ್ ಮಾಡುವ ಮೊದಲು ನಾಯಕ ವಿಲಿಯಮ್ಸನ್ ಅವರು ಮಿಚೆಲ್‌ಗೆ ತನ್ನ ಚೊಚ್ಚಲ ಟೆಸ್ಟ್ ಶತಕವನ್ನು ಪೂರ್ಣಗೊಳಿಸಲು ಅವಕಾಶ ನೀಡಿದರು. ನಾಲ್ಕನೇ ಟೆಸ್ಟ್ ಆಡುತ್ತಿರುವ ಮಿಚೆಲ್ ಔಟಾಗದೆ 102 ರನ್(112ಎ, 8ಬೌ, 2ಸಿ) ಮತ್ತು ಮಧ್ಯಮ ವೇಗಿ ಜಾಮೀಸನ್ (ಔಟಾಗದೆ 30) ಅವರು ಮುರಿಯದ ಜೊತೆಯಾಟದಲ್ಲಿ 74 ರನ್ ಜಮೆ ಮಾಡಿದರು. ವಿಲಿಯಮ್ಸನ್ ಅವರು ಸ್ಟೀಫನ್ ಫ್ಲೆಮಿಂಗ್ ಮತ್ತು ರಾಸ್ ಟೇಲರ್ ನಂತರ 7,000 ಟೆಸ್ಟ್ ರನ್ ಗಳಿಸಿದ ನ್ಯೂಝಿಲ್ಯಾಂಡ್‌ನ 3ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

  ನ್ಯೂಝಿಲ್ಯಾಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಅವರ ನಾಲ್ಕು ದ್ವಿಶತಕಗಳ ದಾಖಲೆಯನ್ನು ವಿಲಿಯಮ್ಸನ್ ಸರಿಗಟ್ಟಿದ್ದಾರೆ

ವಿಲಿಯಮ್ಸನ್ ಕೊನೆಯ ನಾಲ್ಕು ಟೆಸ್ಟ್ ಇನಿಂಗ್ಸ್‌ಗಳಲ್ಲಿ 251, 129, 21 ಮತ್ತು 238 ರನ್ ಗಳಿಸಿದ್ದಾರೆ. ಈ ಪಂದ್ಯದಲ್ಲಿ ಪಾಕಿಸ್ತಾದ ಆಟಗಾರರು ಹಲವು ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದರು . 64 ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟಿತು. ಪಾಕಿಸ್ತಾನದ ಬೌಲರ್‌ಗಳಾದ ಶಾಹೀನ್ ಅಫ್ರಿದಿ , ಮುಹಮ್ಮದ್ ಅಬ್ಬಾಸ್ ಮತ್ತು ಫಹೀಮ್ ಅಶ್ರಫ್ ತಲಾ 2 ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ವಿವರ

 ಪಾಕಿಸ್ತಾನ ಮೊದಲ ಇನಿಂಗ್ಸ್ 297

  ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್ 158.5 ಓವರ್‌ಗಳಲ್ಲಿ 659/5 ಡಿಕ್ಲೇರ್ ( ವಿಲಿಯಮ್ಸನ್ 238, ನಿಕೋಲ್ಸ್ 157,ಮಿಚೆಲ್ ಔಟಾಗದೆ 102 ಲಥಾಮ್ 33, ಜಮೀಸನ್ ಔಟಾಗದೆ 30; ಅಬ್ಬಾಸ್ 98ಕ್ಕೆ 2)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News