ಆಸ್ಟ್ರೇಲಿಯದಲ್ಲಿ 2ನೇ ಎಟಿಪಿ ಕಪ್‌ಗೆ ಮರಳಲಿರುವ ಜೊಕೊವಿಕ್, ನಡಾಲ್
ಸಿಡ್ನಿ, ಜ.5: ಎಟಿಪಿ ಕಪ್ ಚಾಂಪಿಯನ್ ನೊವಾಕ್ ಜೊಕೊವಿಕ್ ಮತ್ತು ರನ್ನರ್ ಅಪ್ ರಫೆಲ್ ನಡಾಲ್ ಫೆಬ್ರವರಿ 1ರಿಂದ ಪ್ರಾರಂಭವಾಗುವ ಈ ವರ್ಷದ ಆರಂಭಿಕ ಟೆನಿಸ್ ಟೂರ್ನಿಗೆ (ಆಸ್ಟ್ರೇಲಿಯದಲ್ಲಿ 2ನೇ ಎಟಿಪಿ ಕಪ್) ಮರಳಲಿದ್ದಾರೆ.
2020ರಲ್ಲಿ ನಡೆದ ಚೊಚ್ಚಲ ಟೂರ್ನಿಯಲ್ಲಿ 24 ತಂಡಗಳು ಭಾಗವಹಿಸಿತ್ತು. ಆಸ್ಟ್ರೇಲಿಯದ ಮೂರು ನಗರಗಳಲ್ಲಿ ಆಡಲಾಗಿತ್ತು. ಸಿಡ್ನಿಯ ಕೆನ್ ರೋಸ್‌ವಾಲ್ ಅರೆನಾದಲ್ಲಿ ನಡೆದ ಫೈನಲ್‌ನಲ್ಲಿ ಜೊಕೊವಿಕ್ ನೇತೃತ್ವದ ಸರ್ಬಿಯ ತಂಡವು ನಡಾಲ್‌ರ ಸ್ಪೇನ್ ತಂಡವನ್ನು ಸೋಲಿಸಿತ್ತು. ಫೆಬ್ರವರಿ 1ರಿಂದ 5ರ ತನಕ ನಡೆಯಲಿರುವ ಎರಡನೇ ಆವೃತ್ತಿಯು 12 ತಂಡಗಳನ್ನು ಒಳಗೊಂಡಿರುತ್ತದೆ. ಕೋವಿಡ್ -19 ಶಿಷ್ಟಾಚಾರಗಳಿಗೊಳಪಟ್ಟು ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆಡಲಿದೆ.
ಜನವರಿ 20 ರಂದು ಡ್ರಾ ನಡೆಯಲಿದ್ದು, ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುವುದು. ಪ್ರತಿ ರೌಂಡ್-ರಾಬಿನ್ ಗುಂಪಿನಲ್ಲಿ ವಿಜೇತರು ಸೆಮಿಫೈನಲ್‌ಗೆ ಮುನ್ನಡೆಯಲಿದ್ದಾರೆ.
ಎಟಿಪಿ ಕಪ್‌ಗೆ ಅರ್ಹತೆ ಪ್ರತಿ ದೇಶದ ಅಗ್ರ ಆಟಗಾರನ ಶ್ರೇಯಾಂಕವನ್ನು ಆಧರಿಸಿದೆ, ಆಸ್ಟ್ರೇಲಿಯವನ್ನು ವೈಲ್ಡ್‌ಕಾರ್ಡ್ ಪ್ರವೇಶದಲ್ಲಿ ಸೇರಿಸಲಾಗಿದೆ. ಟೂರ್ನಿಯಲ್ಲಿ ಭಾಗವಹಿಸಲಿರುವ ದೇಶಗಳಲ್ಲಿ ಆಸ್ಟ್ರಿಯ, ರಶ್ಯ, ಗ್ರೀಸ್, ಜರ್ಮನಿ, ಅರ್ಜೆಂಟೀನ, ಇಟಲಿ, ಜಪಾನ್, ಫ್ರಾನ್ಸ್ ಮತ್ತು ಕೆನಡ ಸೇರಿವೆ.