ಕೊಲ್ಲೂರು ದೇವಸ್ಥಾನದಲ್ಲಿ 4 ಜೋಡಿಯಿಂದ ‘ಸಪ್ತಪದಿ’
ಕೊಲ್ಲೂರು, ಜ. 6: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಚಿತ ಸಾಮೂಹಿಕ ವಿವಾಹದ ‘ಸಪ್ತಪದಿ’ ಕಾರ್ಯಕ್ರಮ ಜಿಲ್ಲೆಯಲ್ಲಿ ಮೊದಲ ಬಾರಿ ಬುಧವಾರ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀಮುಾಂಬಿಕಾ ದೇವಸ್ಥಾನದಲ್ಲಿ ನಡೆಯಿತು.
ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದ ವತಿಯಿಂದ ನಡೆದ ಸರಳ ವಿವಾಹದಲ್ಲಿ ಒಟ್ಟು ನಾಲ್ಕು ಜೋಡಿ ನವದಂಪತಿಗಳು ‘ಸಪ್ತಪದಿ’ ತುಳಿದು ಹೊಸ ಜೀವನಕ್ಕೆ ಪದಾರ್ಪಣೆ ಮಾಡಿದರು.
ದೇವಸ್ಥಾನದ ಸ್ವರ್ಣಮುಖಿ ಸಭಾಭವನದಲ್ಲಿ ಕೋವಿಡ್ ಮಾರ್ಗಸೂಚಿ ಯಂತೆ ಈ ವಿವಾಹ ಕಾರ್ಯಕ್ರಮ ಸರಳವಾಗಿ ನಡೆದು ಅರ್ಧ ಗಂಟೆಯಲ್ಲಿ ಮುಕ್ತಾಯಗೊಂಡಿತು. ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ನವವಧುವರರನ್ನು ಹರಸಿದರು.
ಬೈಂದೂರು ಕೆರ್ಗಾಲಿನ ಶ್ರೀಧರ್ ಪೂಜಾರಿ ಅವರು ಉಡುಪಿಯ ಮಣಿಪ್ರಭ ಶೆಟ್ಟಿ, ಕುಂದಾಪುರ ಜಪ್ತಿಯ ಪ್ರಶಾಂತ್ ಪೂಜಾರಿ ಅವರು ಸೌಕೂರು ನಂದಿನಿ ದೇವಾಡಿಗ, ಗುಜರಾತಿನ ಶ್ರೀಪಾದ ಪಾಲಂಕರ್ ಅವರು ಅಂಕೋಲದ ಪಲ್ಲವಿ, ಉತ್ತರಕನ್ನಡ ಯಾಣದ ಗಜಾನನ ಅವರು ಕುಮಟಾದ ಶಾರದಾ ಅವರೊಂದಿಗೆ ಕೊಲ್ಲೂರಿನಲ್ಲಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಲ್ಲಿ ಎರಡು ಜೋಡಿ ಅಂತರ್ಜಾತಿಯ ವಿವಾಹವಾಗಿರುವುದು ಇಲ್ಲಿನ ವಿಶೇಷವಾಗಿದೆ.
ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ವರನಿಗೆ ಹೂಹಾರ, ಪಂಚೆ, ಶರ್ಟ್, ಶಲ್ಯಕ್ಕಾಗಿ 5 ಸಾವಿರ ರೂ. ಹಾಗೂ ವಧುವಿಗೆ ಚಿನ್ನದ ತಾಳಿ, 8 ಗ್ರಾಂ ತೂಕದ 2 ಚಿನ್ನದ ಗುಂಡು, ಹೂವಿನ ಹಾರ, ಧಾರೆ ಸೀರೆ, ರವಿಕೆ ಖರೀದಿಗೆ 10 ಸಾವಿರ ಪ್ರೊತ್ಸಾಹವನ್ನು ನೀಡಲಾಗುತ್ತದೆ. ದೇವಸ್ಥಾನದ ವತಿಯಿಂದ ವರನಿಗೆ ಐದು ಸಾವಿರ ರೂ. ಮತ್ತು ವಧುವಿಗೆ 10ಸಾವಿರ ರೂ. ನೀಡಿ ಗೌರವಿಸ ಲಾಯಿತು. ಶ್ರೀಮೂಕಾಂಬಿಕೆಗೆ ಪೂಜೆ ಮಾಡಿ ಮಂಗಲಸೂತ್ರಗಳನ್ನು ನವ ದಂಪತಿಗಳಿಗೆ ನೀಡಲಾಯಿತು.
ಗಜಾನನ ಜೋಯಿಷರ ನೇತೃತ್ವದಲ್ಲಿ ಹಿಂದೂ ಸಂಪ್ರದಾಯದಂತೆ ನಾಲ್ವರು ಜೋಡಿ ಹಸೆಮಣೆ ಏರಿದರು. ಆರ್ಟ್ ಆಫ್ ಲಿವಿಂಗ್‌ನ ಶ್ರೀರವಿಶಂಕರ್ ಗುರೂಜಿ ನವಜೋಡಿಗೆ ಆಶೀರ್ವದಿಸಿದರು. ದೇವಳದ ವತಿಯಿಂದ ದಂಪತಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಸರಕಾರದ ಸಪ್ತಪದಿ ಕಾರ್ಯಕ್ರಮವನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಮದುವೆಗೆ ಲಕ್ಷಾಂತರ ರೂ. ದುಂದುವೆಚ್ಚ ಮಾಡುವ ಬದಲು ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ಮದುವೆ ಮಾಡಿಕೊಳ್ಳುವುದು ಸೂಕ್ತ ಎಂದರು.
ಸಾಮೂಹಿಕ ವಿವಾಹ ಸಂದರ್ಭದಲ್ಲಿ ದೇವಳದ ಕಾರ್ಯ ನಿರ್ವಾಹಣಾ ಧಿಕಾರಿ ಎಸ್.ಪಿ.ಬಿ. ಮಹೇಶ್, ಆಡಳಿತ ಮಂಡಳಿ ಸದಸ್ಯರಾದ ಡಾ. ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ಶೆಟ್ಟಿ, ಸಂಧ್ಯಾ ರಮೇಶ್, ರತ್ನಾ, ಕೆ.ಪಿ.ಶೇಖರ್, ಕ್ಷೇತ್ರ ಅರ್ಚಕ ಶ್ರೀಧರ್ ಅಡಿಗ ಉಪಸ್ಥಿತರಿದ್ದರು.