ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿ ನಂ.1 ಸ್ಥಾನಕ್ಕೇರಿದ ನ್ಯೂಝಿಲ್ಯಾಂಡ್

Update: 2021-01-06 09:47 GMT

ಕ್ರೈಸ್ಟ್ ಚರ್ಚ್: ಪಾಕಿಸ್ತಾನ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಇನಿಂಗ್ಸ್ ಹಾಗೂ 176 ರನ್ ಗಳ ಭರ್ಜರಿ ಜಯ ಸಾಧಿಸಿರುವ ಆತಿಥೇಯ ನ್ಯೂಝಿಲ್ಯಾಂಡ್ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದೆ. ಸರಣಿಯಲ್ಲಿ ವೈಟ್ ವಾಶ್ ಮಾಡಿರುವ ಕಿವೀಸ್ ಪಡೆ ಇದೇ ಮೊದಲ ಬಾರಿ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಮೊದಲ ಟೆಸ್ಟ್ ಪಂದ್ಯದಲ್ಲೂ ಕಿವೀಸ್ 101 ರನ್ ಗಳ ಭರ್ಜರಿ ಜಯಸಾಧಿಸಿತ್ತು. ಅಲ್ಲದೆ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲೂ ಆಸ್ಟ್ರೇಲಿಯ ಹಾಗೂ ಭಾರತಕ್ಕೆ ಸಡ್ಡು ಹೊಡೆದಿತ್ತು.

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಕೇನ್ ವಿಲಿಯಮ್ಸನ್ ಟೆಸ್ಟ್ ವೃತ್ತಿಜೀವನದಲ್ಲಿ ನಾಲ್ಕನೇ ಬಾರಿ ದ್ವಿಶತಕ ಸಾಧನೆ ಮಾಡಿದ್ದಲ್ಲದೆ ಈ ಸಾಧನೆಗೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

2ನೇ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 659 ರನ್ ಗಳಿಸಿದ ಕಿವೀಸ್ ಇನಿಂಗ್ಸ್‍ ಡಿಕ್ಲೇರ್ ಮಾಡಿತು. ಪಾಕಿಸ್ತಾನ 2ನೇಇನಿಂಗ್ಸ್ ನಲ್ಲಿ ಮತ್ತೊಮ್ಮೆ ಕಿವೀಸ್ ವೇಗಿ ಕೈಲ್ ಜೇಮಿಸನ್(6-48) ಮಾರಕ ದಾಳಿಗೆ ಕುಸಿದು 186 ರನ್ ಗಳಿಗೆ ಸರ್ವಪತನಗೊಂಡಿತ್ತು. ಮೊದಲ ಇನಿಂಗ್ಸ್ ನಲ್ಲೂ ಜಮೀಸನ್ (5-69)ದಾಳಿಗೆ ಸಿಲುಕಿದ್ದ ಪಾಕ್ ತಂಡ ಅಝರ್ ಅಲಿ(93) ಹಾಗೂ ವಿಕೆಟ್ ಕೀಪರ್ ಮುಹಮ್ಮದ್ ರಿಝ್ವಾನ್(61)ಹೋರಾಟದ ಹೊರತಾಗಿಯೂ 297 ರನ್ ಗಳಿಗೆ  ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತ್ತು.

ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನ್ಯೂಝಿಲ್ಯಾಂಡ್ (118)ಮೊದಲ ಸ್ಥಾನಕ್ಕೇರಿದರೆ, ಆಸ್ಟ್ರೇಲಿಯ(116) ಎರಡನೇ ಹಾಗೂ ಭಾರತ(114)ಮೂರನೇ ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News