ಅಕ್ರಮ ಗಣಿಗಾರಿಕೆಗೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ: ಸಚಿವ ಸಿ.ಸಿ. ಪಾಟೀಲ್
ಉಡುಪಿ, ಜ.6: ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುವ ಗಣಿಗಾರಿಕೆ ಮತ್ತು ಮರಳುಗಾರಿಕೆ ವಿರುದ್ದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಅಕ್ರಮ ಗಳನ್ನು ನಿಯಂತ್ರಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯದ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಕಾರ್ಕಳದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತಿದ್ದರು. ಗಣಿಗಳಿಗೆ ಅನುಮತಿ ನೀಡುವಾಗ ಎಲ್ಲಾ ಅಗತ್ಯ ದಾಖಲೆಗಳನ್ನು ಪರಿ ಶೀಲಿಸಿ ಅನುಮತಿ ನೀಡ ಬೇಕು. ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಗೆ ಅನುಮತಿ ಯನ್ನು ನಿರಾಕರಿಸಬಾರದು ಎಂದರು.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಮರಳುಗಾರಿಕೆ ಅಕ್ರಮ ತಡೆಗಟ್ಟಲು ಮರಳು ತೆಗೆಯುವ ದೋಣಿಗಳ ಜಿಪಿಎಸ್ ಮತ್ತು ಮರಳು ಸಾಗಾಟದ ಲಾರಿಗಳ ಜಿಪಿಎಸ್‌ಗಳನ್ನು ಪೂರಕವಾಗಿ ಜೋಡಣೆ ಮಾಡುವು ದರ ಮೂಲಕ ಅಕ್ರಮ ತಡೆಯಬಹುದು ಎಂದು ಹೇಳಿದರು.
ಮರಳು ಮಿತ್ರ ಆಪ್‌ನಲ್ಲಿನ ಕೆಲವು ದೋಷಗಳನ್ನು ನಿವಾರಿಸಿ ಆಪ್‌ನ ನಿರ್ವ ಹಣೆಯಲ್ಲಿ ಸುಧಾರಣೆ ತರಲಾಗುವುದು. ಈ ಭಾಗದ ಸಮಸ್ಯೆಗಳ ಕುರಿತು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಬೆ ನಡೆಸಿ ಪರಿಹಾರ ಕಂಡುಕೊಳ್ಳ ಲಾಗುವುದು ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.
ಕಾರ್ಕಳ ತಾಲೂಕಿಗೆ ಬೆಳ್ತಂಗಡಿ ಮತ್ತು ಮೂಡಬಿದ್ರೆಯಿಂದ ಅಂತರಜಿಲ್ಲಾ ಮರಳು ಸಾಗಾಟದ ವಾಹನಗಳ ಓಡಾಟಕ್ಕೆ ಅನುಮತಿ ನೀಡಿದಲ್ಲಿ ತಾಲೂಕಿಗೆ ಹೆಚ್ಚಿನ ಮರಳು ಪೂರೈಕೆಯಾಗಲಿದೆ. ಅಲ್ಲದೇ ತಾಲೂಕಿನಲ್ಲಿನ ಸಾಂಪ್ರದಾಯಿಕ ಕಲ್ಲಿನ ಕೆತ್ತನೆ ಕೆಲಸಗಾರರಿಗೆ ಅಗತ್ಯವಿರುವ ಕಲ್ಲುಗಳನ್ನು ಪಡೆಯಲು ತೊಂದರೆ ಯಾದಗಂತೆ ಅಧಿಕಾರಿಗಳು ಗಮನಹರಿಸಬೇಕು. ಗ್ರಾಮೀಣ ಮಟ್ಟದಲ್ಲಿ ಮರಳು ಪಡೆಯಲು ಸಾರ್ವಜನಿಕ ರಿಗೆ ಹೆಚ್ಚಿನ ಅನುಕೂಲ ಕಲಿಸಬೇಕು ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಮನವಿ ಮಾಡಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಮರಳು ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಪ್ರಸ್ತುತ ಸಿಆರ್‌ಝಡ್ ವ್ಯಾಪ್ತಿ ಯಲ್ಲಿ 8,41,710 ಮೆಟ್ರಿಕ್ ಟನ್ ಮರಳು ಗುರುತಿಸಲಾಗಿದೆ. ಕೆಸಿಝಡ್ ಎಂಎಯಿಂದ 7,13,090 ಮೆ.ಟನ್ ಮರಳು ತೆಗೆಯಲು ಅನುಮತಿ ದೊರೆತಿದೆ. ಇದುವರೆಗೆ 3,55,000 ಮೆ.ಟನ್ ಮರಳು ತೆಗೆದು ವಿತರಿಸ ಲಾಗಿದೆ. ಮರಳು ತೆಗೆಯಲು 168 ಮಂದಿಗೆ ಪವಾನಗಿ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕಾರ್ಕಳ ತಾಪಂ ಅಧ್ಯಕ್ಷೆ ಸೌಬಾಗ್ಯ ಮಡಿವಾಳ, ಜಿಪಂ ಸದಸ್ಯ ಸುಮಿತ್ ಶೆಟ್ಟಿ, ಉದಯ ಕೋಟ್ಯಾನ್, ಕುಂದಾಪುರ ಡಿಎಫ್‌ಓ ಆಶೀಶ್ ರೆಡ್ಡಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಕಾರ್ಕಳ ತಹಸೀಲ್ದಾರ್ ಪುರಂದರ, ಬ್ರಹ್ಮಾವರ ತಹಶಿಲ್ದಾರ್ ಕಿರಣ್ ಗೌರಯ್ಯ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೇ.ಹರ್ಷ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.
''ಉಡುಪಿ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ 24 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ನೀಡಿದ್ದು, ಈವರೆಗೆ 16.29 ಕೋಟಿ ರೂ. ರಾಜಸ್ವ ಸಂಗ್ರಹಿಸಿ ಶೇ.67 ರಷ್ಟು ಪ್ರಗತಿ ಸಾಧಿಸಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಸಂಪೂರ್ಣ ಗುರಿ ಸಾಧಿಸಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು''
- ಸಿ.ಸಿ.ಪಾಟೀಲ್, ಸಚಿವರು, ಗಣಿ ಮತ್ತು ಭೂವಿಜ್ಞಾನ ಇಲಾಖೆ