×
Ad

ಸಂಸ್ಕೃತಿ ಮರೆತಾಗ ಸಮಾಜದ ಗುರುತು ಕಳೆದು ಹೋಗುತ್ತದೆ: ಡಾ.ಲೋಕೇಶ್

Update: 2021-01-06 19:20 IST

ಉಡುಪಿ, ಜ.6: ‘ಸುವರ್ಣಯುಗ’ ಎಂಬುದು ದೇಶಕ್ಕೆ ಬ್ರಿಟಿಷರ ಆಗಮನ ದೊಂದಿಗೆ ಬಂದಿದ್ದಲ್ಲ. ಅದಕ್ಕೆ ಎಷ್ಟೋ ಮೊದಲು ಅದು ಭಾರತ ದಲ್ಲಿತ್ತು ಎಂಬುದನ್ನು ಪೊಳಲಿ ಶೀನಪ್ಪ ಹೆಗ್ಗಡೆ, ಐಕಳ ಗಣಪತಿ ರಾವ್, ಮಂಜೇಶ್ವರ ಗೋವಿಂದ ಪೈ ಅವರಂಥ ಇತಿಹಾಸಕಾರರು ಗುರುತಿಸಿ ತೋರಿಸಿಕೊಟ್ಟಿದ್ದರು ಎಂದು ಮಂಗಳೂರು ವಿವಿ ಇತಿಹಾಸ ವಿಭಾಗದ ಪ್ರೊಪೆಸರ್ ಡಾ.ಕೆ.ಎಂ. ಲೋಕೇಶ್ ಹೇಳಿದ್ದಾರೆ.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಶನ್ (ಮಾಹೆ) ಆಶ್ರಯ ದಲ್ಲಿ ಬುಧವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಪೊಳಲಿ ಶೀನಪ್ಪಹೆಗ್ಗಡೆ ಮತ್ತು ಎಸ್.ಆರ್.ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ‘ವಿಕಾಸಗೊಳ್ಳುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಕಥನ’ ವಿಷಯದ ಕುರಿತು ವಿಶೇಷ ಉಪನ್ಯಾ ನೀಡಿ ಅವರು ಮಾತನಾಡುತಿದ್ದರು.

ಇತಿಹಾಸ ಕಥನದ ವಿಷಯಕ್ಕೆ ಬರುವಾಗ ಇದು ಬಹಳಷ್ಟು ಬದಲಾವಣೆ ಯನ್ನು ಕಂಡಿದೆ. ಇದರಲ್ಲಿ ಅಕಾಡೆಮಿಕ್ ಅಲ್ಲದ ಆದರೆ ಭಾರತೀಯ ದೃಷ್ಟಿಕೋನದಿಂದ ಇತಿಹಾಸ ರಚಿಸಿದ ಪೊಳಲಿ, ಐಕಳ, ಗೋವಿಂದ ಪೈಗಳು ಸಹ ಇತಿಹಾಸಕಾರರಾಗಿ ನಮಗೆ ಮುಖ್ಯರಾಗಿ ಕಾಣಿಸುತ್ತಾರೆ. ನಮ್ಮ ಸಂಸ್ಕೃತಿ, ಜಾನಪದವನ್ನು ಮರೆತಾಗ ಸಮಾಜದ ಗುರುತು ಕಳೆದುಹೋುತ್ತದೆ ಎಂದವರು ಎಚ್ಚರಿಸಿದರು.

ತುಳುನಾಡಿನ ಪ್ರಥಮ ಇತಿಹಾಸಕಾರ ಹಾಗೂ ತುಳು ಕಾದಂಬರಿಕಾರರಾ ಗಿರುವ ಪೊಳಲಿ ಶೀನಪ್ಪ ಹೆಗ್ಗಡೆ ಹಾಗೂ ಎಸ್.ಆರ್.ಹೆಗ್ಡೆ ನೆನಪಿನ ಪ್ರಶಸ್ತಿ ಯನ್ನು ಸ್ವೀಕರಿಸಿ ಮಾತನಾಡಿದ ಬಂಟ್ವಾಳ ಎಸ್.ವಿ.ಎಸ್.ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ಮುಖ್ಯಸ್ಥ, ಉಪಪ್ರಾಂಶುಪಾಲ ಹಾಗೂ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಡಾ.ತುಕಾರಾಮ ಪೂಜಾರಿ, ಪೋರ್ಚುಗಲ್ ಹಾಗೂ ಯುರೋಪಿನ ದೇಶಗಳ ಲ್ಲಿರುವ ಅಬ್ಬಕ್ಕ ಕುರಿತ ದಾಖಲೆಗಳ ಅಧ್ಯಯನ ದೊಂದಿಗೆ ರಾಣಿ ಅಬ್ಬಕ್ಕರ ಕುರಿತು ಸಮಗ್ರ ಸಂಶೋಧನೆ ನಡೆಯಬೇಕಾದ ಅಗತ್ಯವಿದೆ ಎಂದರು.

ಸ್ಥಳೀಯ ಸಂಸ್ಕೃತಿ ಸಂಶೋಧನೆಗೆ ಪ್ರೋತ್ಸಾಹ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಅದರದೇ ಆದ ಕಲೆ, ಸಂಸ್ಕೃತಿ ಮತ್ತು ಭಾಷಾ ವೈವಿಧ್ಯತೆ ಇದೆ. ಇದರ ಕುರಿತ ಸಂಶೋಧನೆಗೆ ವಿಶಾಲವಾದ ಅವಕಾಶ ಇನ್ನೂ ಇದೆ. ಈ ಶಾಖೆಗಳ ಲ್ಲಿನ ಸಂಶೋಧನೆಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಮಾಹೆ ಸಿದ್ಧವಿದೆ ಎಂದು ಮಾಹೆಯ ಕುಲಸಚಿವ ಡಾ. ನಾರಾಯಣ ಸಭಾಹಿತ್ ತಿಳಿಸಿದರು.

ಮಾಹೆ ಉತ್ತಮ ಸಂಶೋಧಕರನ್ನು ಗುರುತಿಸಿ ತುಳು ಹಾಗೂ ತುಳುನಾಡ ಸಂಸ್ಕೃತಿ ಕುರಿತ ಸಂಶೋಧನೆಯನ್ನು ಪ್ರೋತ್ಸಾಹಿಸಲಿದೆ. ಆದರೆ ಇದಕ್ಕೆ ತುಳು ವಿಷಯತಜ್ಞ ಸಂಪನ್ಮೂಲವ್ಯಕ್ತಿಗಳು ಬೇಕಾಗಿದ್ದಾರೆ ಅಲ್ಲದೇ ತುಳುವಿನ ಸಾಹಿತ್ಯವನ್ನು ಕನ್ನಡ, ಇಂಗ್ಲೀಷ್ ಹಾಗೂ ಇತರ ಭಾಷೆಗಳಿಗೆ ಅನುವಾದಿಸಿ, ಅವುಗಳ ಪ್ರಕಟಣೆಗೂ ಮಾಹೆ ಮುಂದಾಗಲಿದೆ ಎಂದು ಡಾ.ಸಭಾಹಿತ್ ತಿಳಿಸಿದರು.

ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಇಂಗ್ಲೀಷ್ ವಿಭಾಗ ಮುಖ್ಯಸಥ ಡಾ. ಟಿ.ಕೆ.ರವೀಂದ್ರನ್, ಸಹೋದ್ಯೋಗಿ ಡಾ.ತುಕಾರಾಮ ಪೂಜಾರಿ ಅವರನ್ನು ಅಭಿನಂದಿಸಿ ಮಾತನಾಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಅತಿಥಿಗಳನ್ನು ಸ್ವಾಗತಿಸಿದರೆ, ಪ್ರಶಸ್ತಿ ಸಮಿತಿ ಸದಸ್ಯೆ ಸಾಹಿತಿ, ಡಾ.ಇಂದಿರಾ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ವಂದಿಸಿ, ಸಂಶೋಧನಾ ವಿದ್ಯಾರ್ಥಿ ಶಿವಕುಮಾರ್ ಅಳೋಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News