ಮಂಗಳೂರು ಏರ್‌ಪೋರ್ಟ್‌ನಲ್ಲಿ 67 ಲಕ್ಷ ರೂ. ಮೌಲ್ಯದ ಚಿನ್ನ ವಶ; ಇಬ್ಬರು ಸೆರೆ
ಮಂಗಳೂರು, ಜ.6: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 67 ಲಕ್ಷ ರೂ. ಮೌಲ್ಯದ 1.2 ಕಿ.ಗ್ರಾಂ ಅಕ್ರಮ ಚಿನ್ನ ಸಾಗಾಟವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಸೋಮವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ.
ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪೈಸ್ ಜೆಟ್ ನಲ್ಲಿ ಪ್ರಯಾಣಿಸಿದ್ದ ಇಬ್ಬರ ಬಳಿಯಲ್ಲಿ ಅಕ್ರಮ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಟ್ಕಳದ ಮೂಲದ ಪ್ರಯಾಣಿಕ ದೊಡ್ಡ ಗಾತ್ರದ ಪ್ಲಾಸ್ಟಿಕ್ ಕ್ಯಾಪ್ಸೂಲ್‌ನೊಳಗೆ ಚಿನ್ನದ ಪೇಸ್ಟ್ ತುಂಬಿಸಿ ಗುದದ್ವಾರದಲ್ಲಿಟ್ಟು ಸಾಗಾಟ ಮಾಡಿದ್ದ. ಈತನಿಂದ 641 ಗ್ರಾಂ ಹಾಗೂ ಇನ್ನೋರ್ವ ಕೇರಳದ ಕಾಸರಗೋಡಿನ ನಿವಾಸಿ 646 ಗ್ರಾಂ ಚಿನ್ನದ ಪೇಸ್ಟ್‌ನ್ನು ಒಳಚಡ್ಡಿಯಲ್ಲಿಟ್ಟು ಸಾಗಾಟ ಮಾಡಿದ್ದ. ಒಟ್ಟು 1.2 ಕಿ.ಗ್ರಾಂ. ಚಿನ್ನ ಪತ್ತೆ ಮಾಡಲಾಗಿದೆ. ಆರೋಪಿಗಳು ಸಾಗಾಟ ಮಾಡಲು ಸಹಕಾರಿಯಾಗಲು ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಆರ್‌ಐ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ. ಭಟ್ಕಳದ ಪ್ರಯಾಣಿಕನಲ್ಲಿ ಚಿನ್ನದ ಪೇಸ್ಟ್ ತುಂಬಿದ ಐದು ದೊಡ್ಡ ಗಾತ್ರದ ಪ್ಲಾಸ್ಟಿಕ್ ಕ್ಯಾಪ್ಸೂಲ್‌ಗಳು ಪತ್ತೆಯಾಗಿವೆ. ಕಾಸರಗೋಡಿನ ಪ್ರಯಾಣಿಕ ಚಿನ್ನ ಸಾಗಾಟಕ್ಕೆಂದೇ ಒಳಚಡ್ಡಿಯಲ್ಲಿ ವಿಶೇಷ ಜೇಬನ್ನು ತಯಾರಿಸಿ, ಅದರಲ್ಲಿ ಚಿನ್ನದ ಪೇಸ್ಟ್ ತುಂಬಿದ್ದ ಪ್ಯಾಕೆಟ್ ಅಡಗಿಸಿಟ್ಟು ಸಾಗಾಟ ಮಾಡಿದ್ದ. ಪತ್ತೆಯಾದ ಚಿನ್ನವು 999 ಪರಿಶುದ್ಧತೆ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನ ಲಾಕ್‌ಡೌನ್ ನಿಬಂಧನೆಗಳಿಂದ ಅಕ್ರಮ ಚಿನ್ನ ಸಾಗಾಟಗಾರರಿಗೆ ಸಹಕಾರಿಯಾಗಿದೆ. ಬಂಧಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.