ಉಡುಪಿ ಜಿಲ್ಲೆಯಲ್ಲಿ 10 ಮಂದಿಗೆ ಕೋವಿಡ್ ಪಾಸಿಟಿವ್
ಉಡುಪಿ, ಜ.6: ಜಿಲ್ಲೆಯಲ್ಲಿ ಬುಧವಾರ 10 ಮಂದಿ ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 10 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಸದ್ಯ 109 ಮಂದಿ ಸೋಂಕಿಗಾಗಿ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ ತಲಾ ಐದು ಮಂದಿ ಪುರುಷರು ಮತ್ತು ಮಹಿಳೆಯರು. ಪಾಸಿಟಿವ್ ಬಂದ ಮೂವರು ಪುರುಷರು ಹಾಗೂ ನಾಲ್ವರು ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಎಲ್ಲಾ 10 ಮಂದಿ ಸೋಂಕಿತರಿಗೆ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಸೂಡ ತಿಳಿಸಿದರು.
10 ಮಂದಿ ಗುಣಮುಖ: ಮಂಗಳವಾರ ಜಿಲ್ಲೆಯ 10 ಮಂದಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮುಕ್ತಿ ಪಡೆದವರ ಸಂಖ್ಯೆ ಈಗ 22,851ಕ್ಕೇರಿದೆ. ಸದ್ಯ 109 ಮಂದಿ ಕೆವಿಡ್‌ಗೆ ಸಕ್ರಿಯರಿದ್ದಾರೆ ಎಂದರು.
4577 ಮಂದಿ ನೆಗೆಟಿವ್: ಮಂಗಳವಾರ ಜಿಲ್ಲೆಯಲ್ಲಿ ಒಟ್ಟು 4590 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 4577 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಉಳಿದ 13 ಮಂದಿಯಲ್ಲಿ (ಐಸಿಎಂಆರ್ ವರದಿ) ಸೋಂಕು ಪತ್ತೆಯಾಗಿದೆ. ಈ ಮೂಲಕ ಇದುವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,149 ಆಗಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಮಂಗಳವಾರದವರೆಗೆ ಒಟ್ಟು 3,01,737 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಇವರಲ್ಲಿ 2,78,588 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 23,149 ಮಂದಿ ಈವರೆಗೆ ಪಾಸಿಟಿವ್ ಬಂದಿದ್ದರೆ, 22,851 ಮಂದಿ ಚೇತರಿಸಿಕೊಂಡಿದ್ದಾರೆ.
ಇಂದು ಸಹ ಕೋವಿಡ್‌ನಿಂದ ಯಾರೂ ಮೃತಪಟ್ಟಿಲ್ಲ. ಜಿಲ್ಲೆಯಲ್ಲಿ ಇಂದಿನವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 189 ಮಾತ್ರ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.