×
Ad

ನನಗೆ ವಿಷ ಪ್ರಾಶನ ಮಾಡಲಾಗಿತ್ತು: ಇಸ್ರೊದ ಹಿರಿಯ ವಿಜ್ಞಾನಿ ತಪನ್ ಮಿಶ್ರಾ ಆರೋಪ

Update: 2021-01-06 20:48 IST

ಹೊಸದಿಲ್ಲಿ, ಜ. 6: ಮೂರು ವರ್ಷಗಳ ಹಿಂದೆ ತನಗೆ ವಿಷ ನೀಡಲಾಗಿತ್ತು ಎಂದು ಝೀ ಮೀಡಿಯಾದ ವಿಶೇಷ ಸಂದರ್ಶನದಲ್ಲಿ ಇಸ್ರೋದ ಹಿರಿಯ ವಿಜ್ಞಾನಿ ತಪನ್ ಮಿಶ್ರಾ ಆರೋಪಿಸಿದ್ದಾರೆ. 2017 ಮೇ 23ರಂದು ತನಗೆ ವಿಷ ಅರ್ಸಾನಿಕ್ ಟ್ರಯೋಕ್ಸೈಡ್ ನೀಡಲಾಗಿತ್ತು ಎಂದು ತಪನ್ ಮಿಶ್ರಾ ಫೇಸ್‌ಬುಕ್‌ನಲ್ಲಿ ಸಂದೇಶ ರವಾನಿಸಿದ್ದಾರೆ. ಇಸ್ರೋದ ಕೇಂದ್ರ ಕಚೇರಿಯಲ್ಲಿ ಸಂದರ್ಶನವೊಂದರ ಸಂದರ್ಭ ತನಗೆ ವಿಷ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಭೋಜನದ ಬಳಿಕ ದೋಸೆಯೊಂದಿಗೆ ನೀಡಲಾದ ಚಟ್ನಿಯಲ್ಲಿ ಮಾರಣಾಂತಿಕ ವಿಷವನ್ನು ಬೆರೆಸಿರುವ ಸಾಧ್ಯತೆ ಇದೆ ಎಂದು ಪ್ರಸ್ತುತ ಇಸ್ರೋದ ಹಿರಿಯ ಸಲಹೆಗಾರರಾಗಿರುವ ಮಿಶ್ರಾ ಹೇಳಿದ್ದಾರೆ.

ಈ ಹಿಂದೆ ಅವರು ಇಸ್ರೋದ ಅಹ್ಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಶನ್ ಸೆಂಟರ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ‘ದೀರ್ಘಕಾಲದ ರಹಸ್ಯ’ ಶೀರ್ಷಿಕೆಯ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಿಶ್ರಾ, 2017 ಜುಲೈಯಲ್ಲಿ ಗೃಹ ಖಾತೆಯ ಭದ್ರತಾ ಸಿಬ್ಬಂದಿ ತನ್ನನ್ನು ಭೇಟಿಯಾಗಿದ್ದರು ಹಾಗೂ ಅರ್ಸಾನಿಕ್ ವಿಷ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದರು. ಅನಂತರ ತಾನು ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದೆ. ಅವರು ಪರಿಹಾರ ಸೂಚಿಸಿದರು ಎಂದು ಮಿಶ್ರಾ ಹೇಳಿದ್ದಾರೆ.

ವಿಷಪ್ರಾಶನದಿಂದ ತಾನು ಉಸಿರಾಟದ ತೊಂದರೆ, ಅಸಾಮಾನ್ಯವಾದ ಚರ್ಮದ ದದ್ದು, ಪಂಗಸ್ ಸೋಂಕು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಈ ಕೃತ್ಯದ ಹಿಂದಿನ ಉದ್ದೇಶ ಅತಿ ದೊಡ್ಡ ಸೇನೆಗೆ ಹಾಗೂ ವಾಣಿಜ್ಯ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡುತ್ತಿರುವ ಹಾಗೂ ಸಿಂಥೆಟಿಕ್ ಅಪೆರ್ಟ್ಯೂರ್ ಡಾಡರ್ ನಿರ್ಮಿಸುವ ವಿಜ್ಞಾನಿಯನ್ನು ಹತ್ಯೆಗೈಯುವುದು ಎಂದು ಮಿಶ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News