ಮುಡಿಪು : ಗಣಿ ಚಟುವಟಿಕೆ ಪ್ರದೇಶಕ್ಕೆ ಸಚಿವ ಸಿ.ಸಿ.ಪಾಟೀಲ ಭೇಟಿ

Update: 2021-01-06 16:46 GMT

ಕೊಣಾಜೆ : ಮುಡಿಪು ಸಮೀಪದ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಂಡಿಕಟ್ಟ ಗಣಿಗಾರಿಕೆ ಚಟುವಟಿಕೆ ಪ್ರದೇಶಕ್ಕೆ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ.ಸಿ. ಪಾಟೀಲ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಚಿವರು ಗಣಿಗಾರಿಗೆ ಹಾಗೂ ಅಕ್ರಮ ಮಣ್ಣು ಸಾಗಾಟ ಆರೋಪ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕುಮಾರ್ ಅವರಿಂದ  ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಗಣಿಗಾರಿಕೆ ಪ್ರದೇಶದ ಕುರಿತು ವಿವರಿಸಿದ ಜಿಲ್ಲಾಧಿಕಾರಿಯವರು, ಇದು ಗ್ರಾಮೀಣ ಪ್ರದೇಶವಾಗಿದ್ದು,  ಈಗಾಗಲೇ ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಗೆ ನಿಲ್ಲಿಸಲಾಗಿದೆ. ನೆಲಸಮತಟ್ಟು ಮಾಡಲು ಪರವಾನಿಗೆ ಪಡೆದುಕೊಂಡು ಅದಕ್ಕಿಂತ ವಿಸ್ತಾರವಾದ ಜಾಗದಲ್ಲಿ ಸಮತಟ್ಟು ಮಾಡಿ, ಮಣ್ಣು ಸಾಗಾಟ ಮಾಡಿದ ಆರೋಪ‌ ಕೇಳಿ ಬಂದಿದೆ. ಅದಕ್ಕಾಗಿ ಕಾನೂನು ಕ್ರಮ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.

ಬಳಿಕ ಈ ಬಗ್ಗೆ ಮಾತನಾಡಿದ ಸಚಿವ ಸಿ.ಸಿ.ಪಾಟೀಲ ಅವರು ಉತ್ತರ ಕನ್ನಡ, ಬೀದರ್ ಉಡುಪಿ,‌ದಕ್ಷಿಣ ಕನ್ನಡದಲ್ಲಿ  ಇಂತಹ ಗಣಿಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಹೆಚ್ಚಿವೆ. ಗಣಿಗಾರಿಕೆ ವಿವಾದ, ಸಮಸ್ಯೆಗಳಿಗೆ ಸಂಬಂಧಿಸಿದಂತೆ ನ್ಯಾಯಯುತಾಗಿ ಕ್ರಮ ತೆಗೆದುಕೊಂಡು ಮುನ್ನಡೆಯಬೇಕಿದೆ ಎಂದರು.

ಈ ಸಂದರ್ಭದಲ್ಲಿ  ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್, ತಹಶಿಲ್ದಾರ್ ಗುರುಪ್ರಸಾದ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕ ನಿರಂಜನ್, ಭೂ ಹಾಗೂ ಗಣಿ ಇಲಾಖೆಯ ಎಂಜಿನಿಯರ್ ಸುಷ್ಮಾ, ಬಾಳೆಪುಣಿ ಗ್ರಾಮ ಪಂ. ಪಿಡಿಒ ಸುನೀಲ್, ಕೊಣಾಜೆ ಠಾಣೆಯ ಪಿಎಸ್ಐ ಯೋಗೀಶ್ವರನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News