ಡಬ್ಲ್ಯುಎಚ್‌ಒ ತಜ್ಞರಿಗೆ ಚೀನಾ ಪ್ರವೇಶ ಅನುಮತಿ ವಿಳಂಬದಿಂದ ಭಾರೀ ನಿರಾಶೆ: ಮುಖ್ಯಸ್ಥ

Update: 2021-01-06 17:53 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 6: ಕೊರೋನ ವೈರಸ್ ಸಾಂಕ್ರಾಮಿಕದ ಮೂಲವನ್ನು ಪತ್ತೆಹಚ್ಚಲು ಉದ್ದೇಶಿಸಿರುವ ಅಂತರ್‌ರಾಷ್ಟ್ರೀಯ ಪರಿಣತರ ತಂಡಕ್ಕೆ ಒಳ ಪ್ರವೇಶಿಸಲು ಇನ್ನೂ ಅನುಮತಿ ನೀಡದಿರುವ ಚೀನಾದ ನಿಲುವಿನಿಂದಾಗಿ ತನಗೆ ‘ಭಾರೀ ನಿರಾಶೆ’ಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಮಂಗಳವಾರ ಹೇಳಿದ್ದಾರೆ.

ಕೊರೋನ ವೈರಸ್‌ನ ಆರಂಭಿಕ ಪ್ರಕರಣಗಳ ಬಗ್ಗೆ ತನಿಖೆ ನಡೆಸುವ ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಯ ಭಾಗವಾಗಿ 10 ಸದಸ್ಯರನ್ನೊಳಗೊಂಡ ಪರಿಣತರ ತಂಡವು ಈ ವರ್ಷದ ಆರಂಭದಲ್ಲೇ ಚೀನಾಕ್ಕೆ ತೆರಳಬೇಕಾಗಿತ್ತು. ಮೊದಲ ಕೊರೋನ ವೈರಸ್ ಪ್ರಕರಣಗಳು ಚೀನಾದ ವುಹಾನ್ ನಗರದಲ್ಲಿ ಪತ್ತೆಯಾಗಿದ್ದವು.

‘‘ತಂಡದ ಸದಸ್ಯರು ಚೀನಾ ಪ್ರವೇಶಿಸಲು ಸಾಧ್ಯವಾಗುವಂತೆ ಅಗತ್ಯ ಅನುಮತಿಯನ್ನು ಅಲ್ಲಿನ ಅಧಿಕಾರಿಗಳು ಇನ್ನೂ ನೀಡಿಲ್ಲ ಎನ್ನುವುದು ಇಂದು ನಮಗೆ ತಿಳಿಯಿತು. ಈ ವಿಷಯದಲ್ಲಿ ನಾನು ಚೀನಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಈ ಯೋಜನೆಯು ವಿಶ್ವ ಆರೋಗ್ಯ ಸಂಸ್ಥೆಗೆ ಮುಖ್ಯವಾಗಿದೆ ಎನ್ನುವುದನ್ನು ನಾನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದೇನೆ’’ ಎಂದು ಜಿನೀವದಲ್ಲಿ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

ವಿಳಂಬಕ್ಕೆ ವೀಸಾ ವಿಷಯವೊಂದೇ ಕಾರಣವಲ್ಲ: ಚೀನಾ

ಬೀಜಿಂಗ್, ಜ. 6: ಕೋವಿಡ್-19 ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಸಲು ಚೀನಾಕ್ಕೆ ಆಗಮಿಸುತ್ತಿರುವ ವಿಶ್ವಸಂಸ್ಥೆಯ ಪರಿಣತರ ತಂಡಕ್ಕೆ ದೇಶ ಪ್ರವೇಶಿಸಲು ಅನುಮತಿ ನೀಡಲು ವಿಳಂಬವಾಗುತ್ತಿರುವುದಕ್ಕೆ ವೀಸಾ ವಿಷಯವೊಂದೇ ಕಾರಣವಲ್ಲ ಎಂದು ಚೀನಾ ಬುಧವಾರ ಹೇಳಿದೆ.

‘‘ಮೂಲ ಪತ್ತೆ ವಿಷಯವು ಅತ್ಯಂತ ಸಂಕೀರ್ಣವಾಗಿದೆ. ಚೀನಾದಲ್ಲಿ ಅಂತರ್‌ರಾಷ್ಟ್ರೀಯ ಪರಿಣತರ ಕೆಲಸ ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವುದಕ್ಕಾಗಿ ನಾವು ಅಗತ್ಯ ವಿಧಿವಿಧಾನಗಳನ್ನು ನೆರವೇರಿಸಬೇಕಾಗಿದೆ ಹಾಗೂ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕಾಗಿದೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News