ಹಾಂಕಾಂಗ್: 50ಕ್ಕೂ ಹೆಚ್ಚು ಹೋರಾಟಗಾರರ ಬಂಧನ
Update: 2021-01-06 22:59 IST
ಹಾಂಕಾಂಗ್, ಜ. 6: ವಿವಾದಾಸ್ಪದ ರಾಷ್ಟ್ರೀಯ ಭದ್ರತಾ ಕಾನೂನನ್ನು ಉಲ್ಲಂಘಿಸಿರುವುದಕ್ಕಾಗಿ ಹಾಂಕಾಂಗ್‌ನಲ್ಲಿ 50ಕ್ಕೂ ಅಧಿಕ ಪ್ರಜಾಪ್ರಭುತ್ವ ಪರ ಹೋರಾಟಗಾರರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಂಧಿತರಲ್ಲಿ ಪ್ರಖ್ಯಾತ ಪ್ರಜಾಪ್ರಭುತ್ವ ಪರ ಹೋರಾಟಗಾರರು ಮತ್ತು ಮಾಜಿ ಸಂಸದರು ಸೇರಿದ್ದಾರೆ ಎಂದು ಆರ್‌ಟಿಎಚ್‌ಕೆ ಟಿವಿ ತಿಳಿಸಿದೆ. ಡೆಮಾಕ್ರಟಿಕ್ ಪಾರ್ಟಿಯ ಫೇಸ್‌ಬುಕ್ ಪುಟದಲ್ಲೂ ಈ ಬಗ್ಗೆ ವಿವರಗಳನ್ನು ಕೊಡಲಾಗಿದೆ.
ಶಾಸಕಾಂಗೀಯ ಚುನಾವಣೆಯೊಂದರಲ್ಲಿ ಸ್ಪರ್ಧಿಸುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳನ್ನು ಆರಿಸುವುದಕ್ಕಾಗಿ ಕಳೆದ ವರ್ಷ ಏರ್ಪಡಿಸಲಾದ ಸ್ವತಂತ್ರ ಮತದಾನದಲ್ಲಿ ಭಾಗವಹಿಸಿರುವುದಕ್ಕಾಗಿ ಈ ಹೋರಾಟಗಾರರನ್ನು ಬಂಧಿಸಲಾಗಿದೆ ಎಂದು ಡೆಮಾಕ್ರಟಿಕ್ ಪಕ್ಷದ ಫೇಸ್‌ಬುಕ್ ಪುಟ ತಿಳಿಸಿದೆ.