ಉಡುಪಿ: 4 ಗಂಟೆಗಳ ಅವಧಿಯಲ್ಲಿ 56ಮಿ.ಮೀ. ಮಳೆ; ಹೊಟೇಲ್‌ಗೆ ಸಿಡಿಲು ಬಡಿದು ಹಾನಿ

Update: 2021-01-07 12:10 GMT

ಉಡುಪಿ, ಜ.7: ಬುಧವಾರ ಸಂಜೆ 6 ರಿಂದ ರಾತ್ರಿ 10 ಗಂಟೆ ನಡುವಿನ ಅವಧಿಯಲ್ಲಿ ಅಬ್ಬರದ ಸಿಡಿಲು-ಗುಡುಗಿನೊಂದಿಗೆ ಸುರಿದ ಅನಿರೀಕ್ಷಿತ ಭಾರೀ ಮಳೆಯಿಂದ ಜನತೆ ಒಮ್ಮೆ ತತ್ತರಿಸಿಹೋಗುವಂತಾಯಿತು.

ಜಿಲ್ಲೆಯಾದ್ಯಂತ ಬಂದ ಮಳೆಯಿಂದ ಅನೇಕ ಕಡೆಗಳಲ್ಲಿ ರಸ್ತೆಗಳಲ್ಲಿ ಮೊಣಕಾಲು ಮುಳುಗುವಷ್ಟು ನೀರು ಹರಿದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಸ್ತುಶ: ಮಳೆಗಾಲವನ್ನು ಮತ್ತೆ ನೆನಪಿಸಿತು.

ರಾತ್ರಿ 4-5ಗಂಟೆಗಳ ಕಾಲ ಸತತವಾಗಿ ಸುರಿದ ಮಳೆ, ಸೆಪ್ಟೆಂಬರ್ ತಿಂಗಳಲ್ಲಿ ಭೀಕರವಾಗಿ ಬಂದ ನೆರೆಯ ದಿನಗಳನ್ನು ಮತ್ತೊಮ್ಮೆ ನೆನಪಿಸಿತು. ಈ ಅವಧಿಯಲ್ಲಿ ಉಡುಪಿಯಲ್ಲಿ 57 ಮಿ.ಮೀ. ಮಳೆ ಸುರಿದರೆ, ಕಾರ್ಕಳದಲ್ಲಿ 48.9ಮಿ.ಮೀ. ಮಳೆ ಬಂದಿತ್ತು. ಕುಂದಾಪುರದಲ್ಲಿ 17.9 ಮಿ.ಮೀ. ಮಳೆ ದಾಖಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 37.6ಮಿ.ಮೀ. ಮಳೆ ಸುರಿದ ಬಗ್ಗೆ ವರದಿ ಬಂದಿದೆ.

ಸಾಮಾನ್ಯವಾಗಿ ನವೆಂಬರ್- ಡಿಸೆಂಬರ್ ಮೊದಲ ವಾರದ ಬಳಿಕ ಉಡುಪಿ ಜಿಲ್ಲೆಯಲ್ಲಿ ಮಳೆ ಸುರಿದ ನೆನಪುಗಳೇ ಇಲ್ಲ. ಮತ್ತೆ ಸಾಧಾರಣ ವಾಗಿ ಮಾರ್ಚ್, ಹೆಚ್ಚಾಗಿ ಎಪ್ರಿಲ್-ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆಯನ್ನು ಜಿಲ್ಲೆ ಕಾಣುತ್ತಿತ್ತು. ಆದರೆ ಜನವರಿ ತಿಂಗಳ ಮಧ್ಯ ಭಾಗದಲ್ಲಿ, ಮಳೆಗಾಲವನ್ನೂ ಮೀರಿಸುವಂತಹ ಇಂಥ ಮಳೆ ಬಂದ ನೆನಪೇ ನಮಗಿಲ್ಲ ಎಂದು ಅನೇಕ ಹಿರಿಯರು ಹೇಳುತ್ತಾರೆ.

ಸಿಡಿಲಿನ ಆರ್ಭಟ: ಬುಧವಾರ ಸಂಜೆ ಮಳೆಯೊಂದಿಗೆ ಸಿಡಿಲಿನ ಆರ್ಭಟ ಜೋರಾಗಿಯೇ ಇತ್ತು. ಸಿಡಿಲಿನಿಂದಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಹಾನಿ ಉಂಟಾದ ಬಗ್ಗೆಯೂ ವರದಿಗಳು ಬಂದಿವೆ.

ಬ್ರಹ್ಮಾವರದ ಆಕಾಶವಾಣಿ ಸರ್ಕಲ್ ಬಳಿ ಇರುವ ‘ಸಪ್ತಮಿ’ ಹೊಟೇಲ್‌ಗೆ ಸಿಡಿಲು ಬಡಿದು ಸಂಪೂರ್ಣ ಹಾನಿಯಾಗಿದ್ದು, ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಸಿಡಿಲು ಬಡಿದುದರಿಂದ ಹೊಟೇಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಇದರಿಂದ ಕಟ್ಟಡ ಹಾಗೂ ಹೊಟೇಲ್ ಒಳಗಿದ್ದ ಎಲ್ಲಾ ವಿದ್ಯುತ್ ಉಪಕರಣ, ಪರಿಕರಗಳು ಸುಟ್ಟು ಭಸ್ಮವಾಗಿದೆ.

ಸತೀಶ್ ಎಂಬವರಿಗೆ ಸೇರಿದ ಈ ಹೊಟೇಲ್‌ನಲ್ಲಿ, ಘಟನೆ ನಡೆಯುವಾಗ ಯಾರೂ ಇದ್ದಿರಲಿಲ್ಲ. ಗುಡುಗು-ಮಿಂಚು-ಮಳೆಯ ಕಾರಣ ಸಂಜೆ ಬೇಗ ವ್ಯಾಪಾರ ಮುಗಿಸಿ ಎಲ್ಲರೂ ಮನೆಗೆ ತೆರಳಿದ್ದರು. ಇದರಿಂದ ಸಂಭಾವ್ಯ ಜೀವ ಹಾನಿ ತಪ್ಪಿದಂತಾಗಿದೆ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಧಾವಿಸಿ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಕೃಷ್ಣ ಪೂಜಾರಿ ಎಂಬವರ ವಾಸದ ಮನೆಗೆ ನಿನ್ನೆ ಸಂಜೆ ಸಿಡಿಲು ಬಡಿದು ಭಾಗಶ: ಹಾನಿಯಾ ಗಿದ್ದು ಸುಮಾರು 50,000ರೂ.ಗಳ ನಷ್ಟ ಉಂಟಾಗಿದೆ. ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಕುದುರೆಬೆಟ್ಟು ಎಂಬಲ್ಲಿ ಐತು ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು 80,000ರೂ.ಗಳಿಗೂ ಅಧಿಕ ನಷ್ಟ ಉಂಟಾಗಿದೆ.

ಇನ್ನು ಮುಂಡ್ಕೂರು ಗ್ರಾಮದ ಜಾರಿಕಟ್ಟೆ ಎಂಬಲ್ಲಿ ಲೂಸಿ ಎಂಬವರ ಮನೆ ಕೊಟ್ಟಿಗೆ ಗಾಳಿ-ಮಳೆಗೆ ಕುಸಿದು ಬಿದ್ದಿದ್ದು ಒಂದು ಲಕ್ಷ ರೂ.ನಷ್ಟವಾಗಿರುವ ಬಗ್ಗೆ ಮಾಹಿತಿ ಬಂದಿದೆ.

ಇನ್ನೂ ಎರಡು ದಿನ ಮಳೆ ಸಂಭವ: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಪರಿಣಾಮ ಕರ್ನಾಟಕದ ಕರಾವಳಿ ಹಾಗೂ ಮಲೆ ನಾಡು ಪ್ರದೇಶಗಳು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಇದು ಇನ್ನೂ ಎರಡು ದಿನಗಳ ಕಾಲ ಅಂದರೆ ಜ.9ರವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಕೇಂದ್ರ ಇಂದು ಅಪರಾಹ್ನ ಪ್ರಕಟಿಸಿದೆ.

ಈ ಅವಧಿಯಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಕೆಲವೊಂದು ಕಡೆಗಳಲ್ಲಿ 100ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News