ಟ್ರಂಪ್ ಬೆಂಬಲಿಗರಿಂದ ಸಂಸತ್ ಮೇಲೆ ದಾಳಿ, ದಾಂಧಲೆ: ಹಿಂಸಾಚಾರದಲ್ಲಿ 4 ಮಂದಿ ಸಾವು

Update: 2021-01-07 17:32 GMT

ವಾಷಿಂಗ್ಟನ್, ಜ.7: ಅಧ್ಯಕ್ಷೀಯ ಚುನಾವಣೆಯಲ್ಲಿ ಎದುರಾಗಿರುವ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಡೊನಾಲ್ಡ್ ಟ್ರಂಪ್ ಅವರ ಭಾಷಣದಿಂದ ಪ್ರಚೋದಿತರಾದ ಬೆಂಬಲಿಗರ ಗುಂಪೊಂದು ಕ್ಯಾಪಿಟಲ್ ಹಿಲ್‌ನಲ್ಲಿರುವ ಅಮೆರಿಕ ಸಂಸತ್ ಭವನ ಕಟ್ಟಡದ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದ್ದು, ಹಿಂಸಾಚಾರದಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿದ್ದಾರೆ.

ಅಧಿಕಾರ ಉಳಿಸಿಕೊಳ್ಳುವ ಟ್ರಂಪ್ ಅವರ ಶತಾಯಗತಾಯ ಪ್ರಯತ್ನಕ್ಕೆ ಅಂತ್ಯಹೇಳುವ ಕ್ರಮವಾಗಿ ಜೋ ಬೈಡನ್ ಅವರ ಗೆಲುವನ್ನು ಪ್ರಮಾಣೀಕರಿಸುವ ಪ್ರಕ್ರಿಯೆ ಹಿನ್ನೆಲೆಯಲ್ಲಿ ಆರಂಭವಾದ ಈ ಅನಿರೀಕ್ಷಿತ ವಿದ್ಯಮಾನ ಅಮೆರಿಕದ ಪ್ರಜಾಪ್ರಭುತ್ವದ ಪ್ರಮುಖ ಪ್ರಕ್ರಿಯೆಯನ್ನು ಭಯ ಮತ್ತು ಸಂಕಟದ ಸ್ಥಿತಿಯನ್ನಾಗಿಸಿತು . ಹಿಂಸಾಚಾರಕ್ಕೂ ಮುನ್ನ ಶ್ವೇತಭವನದ ಹೊರಗಡೆ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ್ದ ಟ್ರಂಪ್, ಕ್ಯಾಪಿಟಲ್‌ನತ್ತ ಮುನ್ನಡೆಯುವಂತೆ ಕರೆ ನೀಡಿದ್ದರು. ಇದರಿಂದ ಪ್ರಚೋದಿತರಾದ ಸಾವಿರಾರು ಸಂಖ್ಯೆಯಲ್ಲಿದ್ದ ಟ್ರಂಪ್ ಬೆಂಬಲಿಗರು ಸಂಸತ್ ಭವನದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದಾಗ ಸಂಸತ್‌ನಲ್ಲಿ ಜೋ ಬೈಡನ್ ಅವರ ಚುನಾವಣಾ ಗೆಲುವನ್ನು ಪ್ರಮಾಣೀಕರಿಸುವ ನಿಟ್ಟಿನಲ್ಲಿ ಅಧಿವೇಶನ ನಡೆಯುತ್ತಿತ್ತು. ಸಂಸತ್ ಸದಸ್ಯರಿಗೆ ಗ್ಯಾಸ್ ಮಾಸ್ಕ್ ಧರಿಸಲು ಸೂಚಿಸಿದ ಬಳಿಕ ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಈ ಸಂದರ್ಭ ಸಂಸದರು, ಸಂಸತ್ ಭವನದ ಸಿಬ್ಬಂದಿಗಳು ಹಾಗೂ ಇತರ ಅಧಿಕಾರಿಗಳು ಪ್ರಾಣ ರಕ್ಷಣೆಗಾಗಿ ಮೇಜಿನ ಕೆಳಗೆ ಅವಿತುಕೊಂಡರು. ಪತ್ರಕರ್ತರ ಸಹಿತ ಹಲವರನ್ನು ಸದನದಿಂದ ಹೊರಗೆ ಕರೆತರಲಾಯಿತು. ಆದರೆ ಮೇಲಿನ ಗ್ಯಾಲರಿ ಸೀಟಿನಲ್ಲಿ ಕುಳಿತಿದ್ದವರು ಹೊರಬರಲು ಸಾಧ್ಯವಾಗಲಿಲ್ಲ.

ಕ್ಯಾಪಿಟಲ್ ಪ್ರದೇಶದಲ್ಲಿ ದುಂಡಾವರ್ತನೆ ತೋರುತ್ತಿದ್ದವರನ್ನು ಚದುರಿಸಲು ಸುಮಾರು 4 ಗಂಟೆಗಳ ಕಾರ್ಯಾಚರಣೆ ನಡೆಸಲಾಯಿತು. ಬಳಿಕ ಸಂಸತ್ ಭವನ ಸೇರಿದಂತೆ ಸಂಪೂರ್ಣ ಕ್ಯಾಪಿಟಲ್ ಪ್ರದೇಶದಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಟ್ರಂಪ್ ಬೆಂಬಲಿಗರು ಸಂಸತ್ತಿನಲ್ಲಿ ಸಭಾಧ್ಯಕ್ಷರ ಪೀಠ, ಸದನದ ಸ್ಪೀಕರ್ ಕಚೇರಿ ಹಾಗೂ ಸಂಸತ್ತಿನ ವೇದಿಕೆಯನ್ನು ಅತಿಕ್ರಮಿಸಿಕೊಂಡರಲ್ಲದೆ ‘ಟ್ರಂಪ್ ಚುನಾವಣೆಯಲ್ಲಿ ಗೆದ್ದಿದ್ದಾರೆ’ ಎಂದು ಘೋಷಿಸಿದರು. ಅಲ್ಲಿ ಉಪಸ್ಥಿತರಿದ್ದ ನಾಯಕರನ್ನು ಅಣಕಿಸಿದ ಗುಂಪು, ಸದನದ ಸ್ಪೀಕರ್ ನ್ಯಾನ್ಸಿ ಪೆಲೊಸಿಯ ಚೇಂಬರ್ ಎದುರು ಫೋಟೋ ಕ್ಲಿಕ್ಕಿಸಿಕೊಂಡರು. ಓರ್ವ ವ್ಯಕ್ತಿ ಚೇಂಬರ್‌ನೊಳಗಿದ್ದ ಬೆಂಚಿನ ಮೇಲೇರಿ ನಿಂತರೆ ಮತ್ತೊಬ್ಬ ಉಪಾಧ್ಯಕ್ಷ ಮೈಕ್ ಪೆನ್ಸ್ ಕುಳಿತುಕೊಳ್ಳುವ ಪೀಠದ ಮೇಲೆ ಆಸೀನನಾದ.

ಪರಿಸ್ಥಿತಿ ನಿಯಂತ್ರಿಸಲು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಿತರಾಗಿದ್ದ ಭದ್ರತಾ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಯಿತು. ಪೆಪ್ಪರ್ ಸ್ಪ್ರೇಗೆ (ಮೆಣಸಿನ ಪುಡಿ ಎರಚುವುದು) ಬಗ್ಗದ ಆಕ್ರಮಣಕಾರರು ಸಂಸತ್ ಭವನದ ಬಾಗಿಲಿನತ್ತ ಮುಂದುವರಿಯವುದನ್ನು ತಡೆಯಲು ಅಶ್ರುವಾಯು ಸೆಲ್‌ಗಳನ್ನು ಬಳಸಲಾಯಿತು. ಬಳಿಕ ಸ್ಟನ್ ಗ್ರೆನೇಡ್( ಭಾರೀ ಶಬ್ದ ಹಾಗೂ ಕಣ್ಣು ಕೋರೈಸುವ ಬೆಳಕಿನೊಂದಿಗೆ ಸಿಡಿಯುವ ಗ್ರೆನೇಡ್. ಇದರಿಂದ ದೈಹಿಕವಾಗಿ ಹೆಚ್ಚಿನ ಅಪಾಯವಾಗುವುದಿಲ್ಲ) ಸಿಡಿಸಿ ಗುಂಪನ್ನು ಸಂಸತ್ ಆವರಣದಿಂದ ಹೊರಗೆ ದಬ್ಬಲಾಯಿತು. ದೊಂಬಿ ಮತ್ತು ದಾಂಧಲೆ ನಡೆದ ಬಳಿಕ, ಅಧಿಕಾರಿಗಳು ಸಂಸತ್ ಭವನದಿಂದ ಜನರನ್ನು ಹೊರಗೆ ಹೋಗಲು ಅವಕಾಶ ಮಾಡಿಕೊಡುವ ವೀಡಿಯೊ ದೃಶ್ಯ ವೈರಲ್ ಆಗಿದೆ.

12 ಜನರನ್ನು ಬಂಧಿಸಲಾಗಿದೆ. ಕ್ಯಾಪಿಟಲ್‌ನಲ್ಲಿ ಪೊಲೀಸ್ ಬ್ಯಾರಿಕೇಡ್ ಮೇಲೇರಿ ಮುನ್ನುಗ್ಗಲು ಪ್ರಯತ್ನಿಸಿದಾಗ ಪೊಲೀಸರ ಗುಂಡೇಟಿನಿಂದ ಗಾಯಗೊಂಡ ಮಹಿಳೆ ಸೇರಿದಂತೆ ಒಟ್ಟು 4 ಮಂದಿ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹಿಂಸಾಚಾರ ನಡೆಸಿದ ಟ್ರಂಪ್ ಬೆಂಬಲಿಗರು ಕಿಟಕಿ ಗಾಜುಗಳನ್ನು ಒಡೆದು, ಕಟ್ಟಡದ ಛಾವಣಿಯ ಮೇಲೇರಿ ದಾಂಧಲೆ ನಡೆಸಿದ್ದಾರೆ. ಅಮೆರಿಕ ಧ್ವಜವನ್ನು ಹರಿದು ಹಾಕಿ ಸಂಸತ್ತಿನ ಚೇಂಬರ್‌ಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 52 ಮಂದಿಯನ್ನು ಬಂಧಿಸಲಾಗಿದೆ ಎಂದು ಬುಧವಾರ ತಡರಾತ್ರಿ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಮೆಟ್ರೊಪಾಲಿಟನ್ ಪೊಲೀಸ್ ವಿಭಾಗದ ಮುಖ್ಯಸ್ಥ ರೋಬರ್ಟ್ ಜೆ ಕೋಂಟಿ ಹೇಳಿದ್ದಾರೆ.

ಸಂಸತ್‌ನಲ್ಲಿದ್ದ ಸಂಸದರನ್ನು ಅಲ್ಲಿಂದ ತೆರವುಗೊಳಿಸಿದ 90 ನಿಮಿಷಗಳ ಬಳಿಕ ದಾಂಧಲೆ ನಡೆಸಿದ ಬೆಂಬಲಿಗರನ್ನುದ್ದೇಶಿಸಿ ವೀಡಿಯೋ ಪೋಸ್ಟ್ ಮಾಡಿರುವ ಟ್ರಂಪ್ ‘ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನೀವು ತುಂಬಾ ವಿಶೇಷ ವ್ಯಕ್ತಿಗಳು ’ ಎಂದು ಶ್ಲಾಘಿಸಿ, ಮನೆಗೆ ತೆರಳುವಂತೆ ಕರೆ ನೀಡಿದ್ದಾರೆ.

ಟ್ರಂಪ್ ಬೆಂಬಲಿಗರ ಹಿಂಸಾಚಾರದ ಮಧ್ಯೆಯೇ ಸಂಸತ್ತಿನ ಅಧಿವೇಶನ ಗುರುವಾರ ಬೆಳಗ್ಗಿನವರೆಗೆ ನಡೆದಿದ್ದು ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅವರ ಗೆಲುವನ್ನು ಪ್ರಮಾಣೀಕರಿಸಲಾಗಿದೆ. ಮತ ಎಣಿಕೆ ಹಾಗೂ ಎಲೆಕ್ಟೋರಲ್ ಕಾಲೇಜು ಮತಗಳ ಬಗ್ಗೆ ಟ್ರಂಪ್ ಎತ್ತಿದ್ದ ಆಕ್ಷೇಪಗಳನ್ನು ಸುದೀರ್ಘ ಚರ್ಚೆಯ ಬಳಿಕ ತಳ್ಳಿಹಾಕಲಾಗಿದ್ದು ಅಂತಿಮವಾಗಿ ಬೈಡನ್ 306 ಹಾಗೂ ಟ್ರಂಪ್ 232 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದಾರೆ ಎಂದು ಸಂಸತ್ ಪ್ರಮಾಣೀಕರಿಸಿದೆ.

ಜಾರ್ಜಿಯಾದಲ್ಲಿ ನಡೆದ ಉಪಚುನಾವಣೆಯಲ್ಲಿ ಡೆಮೊಕ್ರಾಟಿಕ್ ಪಕ್ಷ ಎರಡು ಸ್ಥಾನಗಳನ್ನು ಗೆಲ್ಲುವುದು ಖಚಿತಗೊಂಡು ಸಂಸತ್‌ನಲ್ಲಿ ಡೆಮೊಕ್ರಾಟಿಕರಿಗೆ ಪೂರ್ಣ ಬಹುಮತ ಖಾತರಿಯಾದ ಒಂದು ದಿನದ ಬಳಿಕ ಈ ಹಿಂಸಾಚಾರ, ದೊಂಬಿ , ಘರ್ಷಣೆ ಆರಂಭವಾಗಿದೆ. 1814ರ ಬಳಿಕ ಕ್ಯಾಪಿಟಲ್ ಮೇಲೆ ನಡೆದಿರುವ ಮೊದಲ ಆಕ್ರಮಣ ಇದಾಗಿದೆ ಎಂದು ಇತಿಹಾಸಕಾರರು ಹೇಳಿದ್ದಾರೆ. 1812ರಲ್ಲಿ ಬ್ರಿಟಿಷರು ಸಂಸತ್ ಭವನವನ್ನು ಸುಟ್ಟು ಹಾಕಿದ್ದರು.

ಶಕ್ತಿಮೀರಿ ಹೋರಾಡಿ: ಬೆಂಬಲಿಗರಿಗೆ ಕರೆ ನೀಡಿದ್ದ ಟ್ರಂಪ್

ಬುಧವಾರ ಬೆಳಿಗ್ಗೆ ಶ್ವೇತಭವನದ ಎದುರು ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡಿದ್ದ ಟ್ರಂಪ್ ‘ ನೀವು ಶಕ್ತಿಮೀರಿ ಹೋರಾಡದಿದ್ದರೆ ಈ ದೇಶವನ್ನು ಉಳಿಸಿಕೊಳ್ಳಲು ಸಾಧ್ಯವಾಗದು. ದುರ್ಬಲರನ್ನು ಹೊರಗೆ ಹಾಕುವಾ. ಇದು ಶಕ್ತಿವಂತರ ಕಾಲ’ ಎಂದು ಹೇಳಿದ್ದರು. ನಿಮ್ಮೊಂದಿಗೆ ನಾನೂ ಬರುತ್ತೇನೆ, ಕ್ಯಾಪಿಟಲ್ ಹಿಲ್‌ನತ್ತ ತೆರಳೋಣ ಎಂದು ಟ್ರಂಪ್ ಹೇಳಿದ್ದರೂ ಅವರು ತೆರಳಿರಲಿಲ್ಲ. ಆದರೆ ಬೆಂಕಿಯುಗುಳುವ, ಪ್ರಚೋದನಕಾರಿ ಭಾಷಣದೊಂದಿಗೆ ಬೆಂಬಲಿಗರನ್ನು ಕಳುಹಿಸಿಕೊಟ್ಟಿದ್ದರು.

ಟ್ರಂಪ್ ಜತೆಗಿದ್ದ ಅವರ ವಕೀಲ ರೂಡಿ ಗಿಯುಲಿಯಾನಿ, ಯುದ್ಧದ ಮೂಲಕ ಇತ್ಯರ್ಥ ಮಾಡೋಣ ಎಂದು ಕರೆ ನೀಡಿರುವುದಾಗಿ ವರದಿ ತಿಳಿಸಿದೆ.

ಎಲ್ಲಿ ಅವರು ?: ಸಂಸತ್ ಭವನದಲ್ಲಿ ಹುಡುಕಾಡಿದ ಟ್ರಂಪ್ ಬೆಂಬಲಿಗರು

ಅಧಿವೇಶನ ನಡೆಯುತ್ತಿದ್ದಂತೆಯೇ ಸಂಸತ್ ಭವನದೊಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು, ಟ್ರಂಪ್‌ರ ಧ್ವಜ ಹಿಡಿದು ಭವನದ ಆವರಣದಲ್ಲಿ ಠಳಾಯಿಸುತ್ತಿದ್ದರು. ಒಬ್ಬ ವ್ಯಕ್ತಿ ಎದುರಿಗೆ ಸಿಕ್ಕವರಲ್ಲಿ ‘ಎಲ್ಲಿ ಅವರು ? ಎನ್ನುತ್ತಾ ಪ್ರತೀ ಕೋಣೆಗೂ ನುಗ್ಗಿ ಹುಡುಕುತ್ತಿದ್ದ ಎಂದು ವರದಿ ತಿಳಿಸಿದೆ.

ಪೊಲೀಸರೊಂದಿಗೆ ಕೈ ಮಿಲಾಯಿಸಿದ ಗುಂಪು

 ಸಂಸತ್ ಭವನದತ್ತ ಮುನ್ನುಗ್ಗಲು ಪ್ರಯತ್ನಿಸಿದ ಗುಂಪನ್ನು ಚದುರಿಸಲು ಪೊಲೀಸರು ಪೆಪ್ಪರ್ ಸ್ಪ್ರೇ ಬಳಸಿದರೂ ಗುಂಪು ಜಗ್ಗಲಿಲ್ಲ. ಮಾಸ್ಕ್ ಧರಿಸದ, ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ ಹ್ಯಾಟ್ ಧರಿಸಿದ್ದ ಟ್ರಂಪ್ ಬೆಂಬಲಿಗರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು.

ಸಂಸತ್ ಭವನದ ಮೆಟ್ಟಿಲ ಬಳಿ ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡನ್ನು ಧ್ವಂಸಗೊಳಿಸಿದ ಗುಂಪು, ಅಲ್ಲಿದ್ದ ಅಧಿಕಾರಿಗಳನ್ನು ‘ವಿಶ್ವಾಸಘಾತುಕರು’ ಎಂದು ಹೀಯಾಳಿಸಿತು. ಆಗ ಸಂಸತ್ ಭವನಕ್ಕೆ ಯಾರೂ ಪ್ರವೇಶಿಸಬಾರದು ಮತ್ತು ಅಲ್ಲಿಂದ ಯಾರೂ ಹೊರಬರಬಾರದು ಎಂದು ಅಧಿಕಾರಿಗಳು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News