×
Ad

ಸಿಡ್ನಿ ಮೈದಾನದ ಇತಿಹಾಸ ಬದಲಿಸಲು ಟೀಮ್ ಇಂಡಿಯಾ ಸಿದ್ಧ

Update: 2021-01-07 10:38 IST

ಸಿಡ್ನಿ, 6: ಎರಡನೇ ಟೆಸ್ಟ್‌ನಲ್ಲಿ ಭರ್ಜರಿ ಗೆಲುವಿನೊಂದಿಗೆ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಟೀಮ್ ಇಂಡಿಯಾ ಗುರವಾರ ಇಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಕ್ಕೆ ಇನ್ನೊಮ್ಮೆ ಆಘಾತ ನೀಡಲು ನೋಡುತ್ತಿದೆ.

  ಹಂಗಾಮಿ ನಾಯಕ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಭಾರತವು ಎರಡನೇ ಟೆಸ್ಟ್‌ನಲ್ಲಿ 8 ವಿಕೆಟ್‌ಗಳ ಜಯ ಸಾಧಿಸಿದೆ. ಇದೀಗ ಸ್ಟಾರ್ ಬ್ಯಾಟ್ಸ್‌ವನ್ ರೋಹಿತ್ ಶರ್ಮಾ ಸೇರ್ಪಡೆಯು ತಂಡದ ಬ್ಯಾಟಿಂಗ್‌ನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ. ರೋಹಿತ್ ಶರ್ಮಾ ಉಪಸ್ಥಿತಿಯು ಟೆಸ್ಟ್ ಪಂದ್ಯಕ್ಕೆ ಹೊಸ ಆಯಾಮವನ್ನು ನೀಡುವುದನ್ನು ನಿರೀಕ್ಷಿಸಲಾಗಿದೆ.

ಸಿಡ್ನಿ ಕ್ರಿಕೆಟ್ ಮೈದಾನ (ಎಸ್‌ಸಿಜಿ) ಇತ್ತೀಚಿನ ವರ್ಷಗಳಲ್ಲಿ ಭಾರತದ ಕೆಲವು ಅಸಾಧಾರಣ ಬ್ಯಾಟಿಂಗ್ ಪ್ರದರ್ಶನಗಳಿಗೆ ಸಾಕ್ಷಿಯಾಗಿದ್ದರೂ, ಇಲ್ಲಿ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಹಿನ್ನೆಲೆಯಲ್ಲಿ ಭಾರತದ ಪಾಲಿಗೆ ಇದು ಅದೃಷ್ಟದ ತಾಣವಲ್ಲ. 1947ರಿಂದ ಈ ತನಕ ನಡೆದ 12 ಟೆಸ್ಟ್ ಪಂದ್ಯಗಳಲ್ಲಿ ಭಾರತ ಏಕೈಕ ಗೆಲುವು ದಾಖಲಿಸಿದೆ. 6 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. 42 ವರ್ಷಗಳ ಹಿಂದೆ ಅಂದರೆ 1978ರಲ್ಲಿ ಭಾರತ ಇಲ್ಲಿ ನಡೆದ ಟೆಸ್ಟ್‌ನಲ್ಲಿ ಇನಿಂಗ್ಸ್ ಮತ್ತು 2 ರನ್‌ಗಳ ಅಂತರದಲ್ಲಿ ಆಸ್ಟ್ರೇಲಿಯಕ್ಕೆ ಸೋಲುಣಿಸಿತ್ತು. 2019, ಜನವರಿ 3ರಿಂದ 7ರ ತನಕ ನಡೆದ ಪಂದ್ಯದಲ್ಲಿ ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಚೇತೇಶ್ವರ ಪೂಜಾರ 193 ರನ್ ಮತ್ತು ರಿಷಭ್ ಪಂತ್ 159 ರನ್ ನೆರವಿನಲ್ಲಿ ಭಾರತ 7 ವಿಕೆಟ್ ನಷ್ಟದಲ್ಲಿ 622 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 300 ರನ್‌ಗಳಿಗೆ ಆಲೌಟಾಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿತ್ತು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ಸಾರಥ್ಯ ವಹಿಸಿರುವ ರಹಾನೆ ತಂಡ ಮೂರನೇ ಪಂದ್ಯದಲ್ಲಿ ಜಯ ಗಳಿಸಿದರೆ ತಂಡದ ಪಾಲಿಗೆ ಅದೊಂದು ಅವಿಸ್ಮರಣೀಯ ಕ್ಷಣವಾಗಲಿದೆ. ಆಸ್ಟ್ರೇಲಿಯದ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಭಾರತದ ಬೌಲಿಂಗ್ ವಿಭಾಗವು ಆಸ್ಟ್ರೇಲಿಯಕ್ಕಿಂತ ಬಲಿಷ್ಠವಾಗಿದೆ. ರೋಹಿತ್ ಶರ್ಮಾ ಐಪಿಎಲ್ ವೇಳೆ ಆಗಿರುವ ಗಾಯದಿಂದಾಗಿ ಸೀಮಿತ ಓವರ್‌ಗಳ ಸರಣಿಯಿಂದ ದೂರವಾಗಿದ್ದರು. ಇದೀಗ ಚೇತರಿಸಿಕೊಂಡು ಆಗಮಿಸಿರುವ ರೋಹಿತ್ ಶರ್ಮಾ ಸಿಡ್ನಿಯ ಅಪಾರ್ಟಿಮೆಂಟ್‌ನಲ್ಲಿ ಎರಡು ವಾರಗಳ ಕ್ವಾರಂಟೈನ್‌ನಲ್ಲಿದ್ದರು. ಅಂತಿಮವಾಗಿ ತನ್ನ ತಂಡದ ಸದಸ್ಯರೊಂದಿಗೆ ಒಂದಾದರು. ಆದರೆ ಮೆಲ್ಬೋರ್ನ್ ರೆಸ್ಟೋರೆಂಟ್‌ನಲ್ಲಿ ಹೊಸ ವರ್ಷದ ದಿನ ತಂಡದ ಇತರ ನಾಲ್ಕು ಮಂದಿ ಸಹ ಆಟಗಾರರೊಂದಿಗೆ ಊಟ ಮಾಡಿ ಸಿಕ್ಕಿ ಬಿದ್ದರು. ಅಭಿಮಾನಿಯೊಬ್ಬರು ಅವರಿಗೆ ಗೊತ್ತಾಗದಂತೆ ವಿಡಿಯೋ ಮಾಡಿದರು.ಅಷ್ಟೇ ಅಲ್ಲ ಹೋಟೆಲ್ ಬಿಲ್ ಪಾವತಿಸಿ ಈ ಪ್ರಕರಣ ಬೆಳಕಿಗೆ ಬರುವಂತೆ ಮಾಡಿದರು. ರೋಹಿತ್ ಶರ್ಮಾ ಸೇರಿದಂತೆ ಐವರು ಆಟಗಾರರು ಕೋವಿಡ್ -19 ತಡೆ ಶಿಷ್ಟಾಚಾರವನ್ನು ಉಲ್ಲಂಘಿಸಿದ ಆರೋಪವನ್ನು ಎದುರಿಸುವಂತಾಯಿತು. ರೋಹಿತ್ ಶರ್ಮಾ ನೆಟ್ ಅಭ್ಯಾಸದಲ್ಲಿ ಚೆನ್ನಾಗಿ ಬ್ಯಾಟ್ ಬೀಸಿದ್ದಾರೆ. ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ರೋಹಿತ್‌ಗೆ ಅಭ್ಯಾಸ ನಡೆಸಲು ಉತ್ತಮ ಬೆಂಬಲ ನೀಡಿದ್ದಾರೆ. ರೋಹಿತ್ ಶರ್ಮಾ ತಂಡದ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ತಂಡದ ಮ್ಯಾನೇಜ್‌ಮೆಂಟ್ ಸೈನಿ ಅಥವಾ ಶಾರ್ದುಲ್ ಇವರಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

   ಸಿಡ್ನಿ ಪಿಚ್ ಸಾಂಪ್ರದಾಯಿಕವಾಗಿ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ. ಭಾರತದ ಪರ ಈ ಕ್ರೀಡಾಂಗಣದಲ್ಲಿ ಸುನೀಲ್ ಗವಾಸ್ಕರ್, ರವಿಶಾಸ್ತ್ರಿ, ಸಚಿನ್ ತೆಂಡುಲ್ಕರ್ ಮತ್ತು ಕಳೆದ ಪ್ರವಾಸದಲ್ಲಿ ಪೂಜಾರ ಮತ್ತು ರಿಷಭ್ ಪಂತ್ ಶತಕ ಬಾರಿಸಿದ್ದರು. ರೋಹಿತ್ ಮತ್ತು ಶುಭ್‌ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭವನ್ನು ನೀಡಲು ಸಾಧ್ಯವಾದರೆ, ಪೂಜಾರ ತಮ್ಮದೇ ಆದ ರಕ್ಷಣಾತ್ಮಕ ಆಟವನ್ನು ಆಡುವ ನಿಟ್ಟಿನಲ್ಲಿ ಹೆಚ್ಚು ನಿರಾಳರಾಗುತ್ತಾರೆ.

ರೋಹಿತ್ ಶರ್ಮಾರಿಗೆ ಮಯಾಂಕ್ ಅಗರ್ವಾಲ್ ಸ್ಥಾನ ತೆರವುಗೊಳಿಸಬೇಕಾಗುತ್ತದೆ . ಕೇವಲ 16 ಟೆಸ್ಟ್‌ಗಳನ್ನು ಆಡದಿರುವ ಜಸ್ಪ್ರೀತ್ ಬುಮ್ರಾ ಅವರು ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಅವರಿಗೆ ಅದು ಸಿರಾಜ್ ಅಥವಾ ಸೈನಿ ಸಾಥ ನೀಡಲಿದ್ದಾರೆ. ಆಸ್ಟ್ರೇಲಿಯ: ಟಿಮ್ ಪೈನ್ (ನಾಯಕ ಮತ್ತು ವಿಕೆಟ ಕೀಪರ್ ) ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್, ವಿಲ್ ಪುಕೊವಿಸ್ಕಿ , ಮಾರ್ನಸ್ ಲ್ಯಾಬುಶೇನ್ ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, , ನಾಥನ್ ಲಿಯಾನ್, ಪ್ಯಾಟ್ ಕಮಿನ್ಸ್ , ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್, ಮಾರ್ಕಸ್ ಹ್ಯಾರಿಸ್, ಮಿಚೆಲ್ ಸ್ವೆಪ್ಸನ್, ಮೈಕೆಲ್ ನೇಸರ್.

  ಭಾರತ :ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಮುಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ, ಶಾರ್ದುಲ್ ಠಾಕೂರ್, ನವದೀಪ್ ಸೈನಿ.

ಪಂದ್ಯದ ಸಮಯ: ಬೆಳಿಗ್ಗೆ 5 ಗಂಟೆಗೆ ಪ್ರಾರಂಭ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News