ಜ.11: ಪುತ್ತೂರಿನಲ್ಲಿ ‘ಮುನ್ನಡೆ ಯಾತ್ರೆ’ ಸಮಾರೋಪ

Update: 2021-01-07 11:41 GMT

ಮಂಗಳೂರು, ಜ. 7: ಎಸ್ಕೆಎಸೆಸ್ಸೆಫ್ ಕೇಂದ್ರೀಯ ಸಮಿತಿಯು ‘ಅಸ್ತಿತ್ವ ಹಕ್ಕು ಯುವ ಜನತೆ ಮರಳಿ ಪಡೆಯುತ್ತಿದೆ’ ಎಂಬ ಧ್ಯೇಯ ವಾಕ್ಯವನ್ನು ಮುಂದಿರಿಸಿಕೊಂಡು ಕಳೆದ ವರ್ಷದ ಡಿ.6ರಿಂದ ಜ.26ರವರೆಗೆ ನಡೆಸುತ್ತಿರುವ ಅಭಿಯಾನದ ಅಂಗವಾಗಿ ಡಿ.30ರಂದು ಕೇರಳದ ತಿರುವನಂತಪುರಂನಿಂದ ಸೈಯದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಅವರ ನೇತೃತ್ವದಲ್ಲಿ ಆರಂಭಿಸಿದ ‘ಮುನ್ನಡೆ ಯಾತ್ರೆ’ಯ ಸಮಾರೋಪ ಸಮಾರಂಭವು ಜ.11ರಂದು ಪುತ್ತೂರಿನಲ್ಲಿ ನಡೆಯಲಿದೆ ಎಂದು ಎಸ್ಕೆಎಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಸೈಯದ್ ಅಮೀರಲಿ ತಂಙಳ್ ಕಿನ್ಯ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ದೇಶದಲ್ಲಿ ಕೋಮು ಸೌಹಾರ್ದತೆಯ ಪರಂಪರೆಯನ್ನು ಯುವ ತಲೆಮಾರು ಗಳಿಗೆ ಪರಿಚಯಿಸುವುದು, ಸೌಹಾರ್ದಕ್ಕೆ ಧಕ್ಕೆ ತರುವ ಹಿತಾಶಕ್ತಿಗಳ ಕುರಿತು ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನದ ಪ್ರಯುಕ್ತ 4 ಸಾವಿರ ಪ್ರಭಾಷಣಗಳು, 600 ಸೆಮಿನಾರ್‌ಗಳು, ಸೌಹಾರ್ದ ಸಂಜೆ, ಮಾನವ ಸರಪಳಿ ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಆಯೋಜಿಸಿರುವ ‘ಮುನ್ನಡೆ ಯಾತ್ರೆ’ಯನ್ನು ದ.ಕ.ಜಿಲ್ಲೆಯಲ್ಲಿ ಯಶಸ್ಸಿಗೊಳಿಸಲು ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಜ.11ರಂದು ಬೆಳಗ್ಗೆ 10ಕ್ಕೆ ಉಳ್ಳಾಲದಲ್ಲಿ ಮತ್ತು ಮಧ್ಯಾಹ್ನ 1 ಗಂಟೆಗೆ ಮಿತ್ತಬೈಲಿನಲ್ಲಿ ಯಾತ್ರಾ ತಂಡವನ್ನು ಬರಮಾಡಿಕೊಳ್ಳಲಾಗುತ್ತದೆ. ಅಪರಾಹ್ನ 3 ಗಂಟೆಗೆ ಪುತ್ತೂರಿನ ಸಂಪ್ಯದಲ್ಲಿ ಸಮಾರೋಪ ನಡೆಯಲಿದೆ. ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯದ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ವಿಷಯ ಮಂಡಿಸಲಿದ್ದಾರೆ. ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಕೇಂದ್ರ ಮುಶಾವರ ಸದಸ್ಯರಾದ ಬಿಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಝೈನುಲ್ ಆಬಿದೀನ್ ತಂಙಳ್ ದಾರುಸ್ಸಲಾಂ ಬೆಳ್ತಂಗಡಿ, ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ, ಭಾರತೀಯ ಕೃಷಿಕ ಸಮಾಜದ ಮುಖಂಡ ಹೈದರ್ ಪರ್ತಿಪ್ಪಾಡಿ, ಸತ್ತಾರ್ ಪಂದಲ್ಲೂರು, ರಶೀದ್ ಫೈಝಿ ವೆಳ್ಳಾಯಿಕ್ಕೋಡು, ಅನೀಸ್ ಕೌಸರಿ, ತಾಜುದ್ದೀನ್ ದಾರಿಮಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್ಕೆಎಸೆಸ್ಸೆಫ್ ಕೇಂದ್ರೀಯ ಸಮಿತಿಯ ಕಾರ್ಯದರ್ಶಿ ಖಾಸಿಂ ದಾರಿಮಿ, ದ.ಕ.ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ, ಕಾರ್ಯದರ್ಶಿ ಇಕ್ಬಾಲ್ ಬಾಳಿಲ, ವರ್ಕಿಂಗ್ ಕಾರ್ಯದರ್ಶಿ ಆರೀಫ್ ಬಡಕಬೈಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News