ಅಮೆರಿಕ ಚುನಾವಣೆ: ಜೋ ಬೈಡನ್, ಕಮಲಾ ಹ್ಯಾರಿಸ್ ಗೆಲುವನ್ನು ಪ್ರಮಾಣೀಕರಿಸಿದ ಅಮೆರಿಕ ಸಂಸತ್
Update: 2021-01-07 15:47 IST
ವಾಷಿಂಗ್ಟನ್: ಗೌರವಯುತವಾಗಿ ನಡೆಯಬೇಕಾಗಿದ್ದ ಸಮಾರಂಭವು ಹಿಂದೆಂದೂ ನಡೆಯದ ರಾಜಕೀಯ ಸಂಘರ್ಷದ ದುಸ್ವಪ್ನವಾಗಿ ಪರಿಣಮಿಸಿದ ದಿನದಂದು ಜೋ ಬೈಡನ್ ಅವರ ಅಧ್ಯಕ್ಷೀಯ ಚುನಾವಣೆಯ ಗೆಲುವನ್ನು ಅಮೆರಿಕದ ಸಂಸತ್ ಔಪಚಾರಿಕವಾಗಿ ಪ್ರಮಾಣೀಕರಿಸಿದೆ.
ಬುಧವಾರ ಸಂಸತ್ ಭವನದ ಮೇಲೆ ಟ್ರಂಪ್ ಬೆಂಬಲಿಗರು ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ ಬಳಿಕ ಗುರುವಾರ ಮುಂಜಾನೆ ಹೌಸ್ ಹಾಗೂ ಸೆನೆಟ್ ಡೆಮಾಕ್ರಟಿಕ್ ಪಕ್ಷದ ಇಲೆಕ್ಟೋರಲ್ ಕಾಲೇಜು ಗೆಲುವನ್ನುಪ್ರಮಾಣೀಕರಿಸಿದವು.
ಸುಮಾರು ಆರು ಗಂಟೆಗಳ ಅಧಿಕ ಸಮಯ ಟ್ರಂಪ್ ಬೆಂಬಲಿಗರಿಂದ ಹಿಂಸಾಚಾರ ನಡೆದ ಬಳಿಕ ಸಂಸತ್ ಸದಸ್ಯರು ಅಧಿವೇಶನವನ್ನು ಪುನರಾರಂಭಿಸಿದರು.
ಬೈಡನ್ ಅವರು ಟ್ರಂಪ್ ಅವರನ್ನು 306-232 ಇಲೆಕ್ಟೋರಲ್ ಮತಗಳಿಂದ ಸೋಲಿಸಿದ್ದಾರೆ. ಜನವರಿ 20ರಂದು ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.