'ಸುಂದರ ದೃಶ್ಯ': ಅಮೆರಿಕಾ ಸಂಸತ್ ಕಟ್ಟಡದ ಮೇಲೆ ಟ್ರಂಪ್ ಬೆಂಬಲಿಗರ ದಾಳಿಗೆ ಚೀನಾ ವ್ಯಂಗ್ಯ
ಬೀಜಿಂಗ್,ಜ.07: ಅಮೆರಿಕಾದ ಸಂಸತ್ ಕಟ್ಟಡದಲ್ಲಿ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯ ಕುರಿತಂತೆ ಚೀನಾದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಪೂರಿತ ಟ್ವೀಟ್‍ಗಳು ಹರಿದಾಡಿವೆ. ಇಂದು ನಡೆದ ದಾಂಧಲೆ ಹಾಗೂ 2019ರಲ್ಲಿ ನಡೆದ ಹಾಂಕಾಂಗಿನಲ್ಲಿ ನಡೆದ ಸರಕಾರಿ ವಿರೋಧಿ ಪ್ರತಿಭಟನೆಗಳ ಕುರಿತಂತೆ ವಾಷಿಂಗ್ಟನ್ ಪ್ರತಿಕ್ರಿಯಿಯೆಯಲ್ಲಿರುವ ವೈರುಧ್ಧ್ಯತೆಯನ್ನೂ ಚೀನಾ ಖಂಡಿಸಿದೆ.
ಚೀನಾದ ಅಧಿಕೃತ ಗ್ಲೋಬಲ್ ಟೈಮ್ಸ್ ಗುರುವಾರ ಬೆಳಿಗ್ಗೆ ಇಂದಿನ ಅಮೆರಿಕಾದ ಘಟನೆಯ ಹಾಗೂ 2019ರ ಜುಲೈನಲ್ಲಿ ಹಾಂಕಾಂಗ್ ಪ್ರತಿಭಟನಾಕಾರರು ನಗರದ ಶಾಸಕಾಂಗ ಪರಿಷತ್ ಸಂಕೀರ್ಣಕ್ಕೆ ಮುತ್ತಿಗೆ ಹಾಕಿದ ಸಂದರ್ಭ ಚಿತ್ರಗಳನ್ನು ಅಕ್ಕಪಕ್ಕದಲ್ಲಿ ಪೋಸ್ಟ್ ಮಾಡಿದೆ.
ಅಮೆರಿಕಾದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರನ್ನೂ ಟ್ಯಾಗ್ ಮಾಡಿರುವ ಗ್ಲೋಬಲ್ ಟೈಮ್ಸ್, ಪೆಲೋಸಿ ಅವರು ಒಮ್ಮೆ ಹಾಂಕಾಂಗ್ ಹಿಂಸಾಚಾರವನ್ನು "ನೋಡಲು ಸುಂದರವಾದ ದೃಶ್ಯ" ಎಂದಿದ್ದರು. ಕ್ಯಾಪಿಟೊಲ್ ಹಿಲ್‍ನ ಇತ್ತೀಚಿಗಿನ ಬೆಳವಣಿಗೆಗಳ ಕುರಿತಂತೆಯೂ ಅವರು ಇದೇ ಮಾತುಗಳನ್ನು ಆಡುತ್ತಾರೆಯೇ ಎಂದು ನೋಡಬೇಕಿದೆ,"ಎಂದು ಬರೆದಿದೆ.
ಚೀನಾದ ಕಮ್ಯುನಿಸ್ಟ್ ಯುತ್ ಲೀಗ್ ಕೂಡ ಅಮೆರಿಕಾದ ಇಂದಿನ ಘಟನೆಯನ್ನು "ಸುಂದರ ದೃಶ್ಯ" ಎಂದು ತನ್ನ ಟ್ವಿಟ್ಟರ್ ರೀತಿಯ ವೀಬೋ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದೆ.
ಚೀನಾದ ವೀಬೋ ಸಾಮಾಜಿಕ ಜಾಲತಾಣದಲ್ಲಿ ʼಟ್ರಂಪ್ ಸಪೋರ್ಟರ್ಸ್ ಸ್ಟಾರ್ಮ್ ಯುಎಸ್ ಕ್ಯಾಪಿಟೊಲ್ʼ ಹ್ಯಾಶ್ ಟ್ಯಾಗ್ ಇಂದು ಟ್ರೆಂಡಿಂಗ್ ಆಗಿತ್ತು.