ಕುಂದಾಪುರ ಪುರಸಭೆ ವಿಶೇಷ ಸಭೆಯಲ್ಲಿ ಅಧಿಕಾರಿಗಳ ಗೈರು: ಸದಸ್ಯರಿಂದ ಆಕ್ರೋಶ

Update: 2021-01-07 14:22 GMT

ಕುಂದಾಪುರ, ಜ.7: ಕುಂದಾಪುರ ಪುರಸಭೆಯ ಮಹತ್ವಾಕಾಂಕ್ಷೆ ಯೋಜನೆ ನಿರಂತರ ನೀರು ಪೂರೈಕೆ ಕಾಮಗಾರಿ ಕುರಿತು ಮಾಹಿತಿ ನೀಡ ಬೇಕಾಗಿದ್ದ ಅಧಿಕಾರಿ, ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಸದಸ್ಯರು ಇಂದು ನಡೆದ ವಿಶೇಷ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆಯಲ್ಲಿ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಇಂದು ನಡೆದ ಪುರಸಭೆಯ ಕುಡಿಯುವ ನೀರು ಹಾಗೂ ಒಳ ಚರಂಡಿ ಯೋಜನೆ ಕುರಿತ ವಿಶೇಷ ಸಭೆಯಲ್ಲಿ ಸದಸ್ಯ ಮೋಹನದಾಸ್ ಶೆಣೈ ಈ ವಿಷಯ ಪ್ರಸ್ತಾಪಿಸಿದರು.

ಜಲಸಿರಿ ಯೋಜನೆ ಬಗ್ಗೆ ವಿಶೇಷ ಸಭೆ ನಿಗದಿ ಪಡಿಸಿ ಮಾಹಿತಿ ನೀಡಿದರೂ ಯೋಜನೆಯ ಮುಖ್ಯಾಧಿಕಾರಿ ಸಭೆಗೆ ಬಂದಿಲ್ಲ. ಇದು ಪುರಸಭೆ ಹಾಗೂ ಸದಸ್ಯರಿಗೆ ಮಾಡಿರುವ ಅಪಮಾನ. ಅಧಿಕಾರಿ ಇಲ್ಲದೆ ಸಭೆಯಲ್ಲಿ ಯೋಜನೆ ಕುರಿತು ಚರ್ಚೆ ಮಾಡಲು ಸಾಧ್ಯ ಇಲ್ಲ. ಮತ್ತೊಮ್ಮೆ ಸಮಯ ನಿಗದಿ ಪಡಿಸಿ ಸಭೆ ಕರೆಯಬೇಕು ಎಂದು ಮೋಹನ್ ‌ದಾಸ್ ಶೆಣೈ ಒತ್ತಾಯಿಸಿದರು.

ಸದಸ್ಯರಾದ ಗಿರೀಶ್ ದೇವಾಡಿಗ, ಶೇಖರ ಪೂಜಾರಿ, ದೇವಕಿ ಸಣ್ಣಯ್ಯ ಇದಕ್ಕೆ ಧ್ವನಿಗೂಡಿದರು. ಮುಂದೆ ನಡೆಯುವ ಸಭೆಯ ವರೆಗೆ ಜಲಸಿರಿ ಯೋಜನೆ ಕಾಮಗಾರಿ ನಿಲ್ಲಿಸಿ, ಸಭೆಯಲ್ಲಿ ಚರ್ಚೆ ಕೈಬಿಡಬೇಕು. ಅಧಿಕಾರಿ ಬಂದ ನಂತರವೇ ಈ ಕುರಿತು ಚರ್ಚೆ ಮಾಡಬೇಕು ಎಂದು ಆಗ್ರಹಿಸಿ ದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಅಧಿಕಾರಿ ಬಂದ ಬಳಿಕ ಬೇರೆಯೇ ಸಭೆ ನಡೆಸುವ ತೀರ್ಮಾನ ಮಾಡಲಾಗು ವುದು ಎಂದರು.

ಒಳಚರಂಡಿ ಯೋಜನೆ:  ಪುರಸಭೆಯ ಒಳಚರಂಡಿ ಯೋಜನೆಯ ಕುರಿತು ಸಭೆಗೆ ಮಾಹಿತಿ ನೀಡಿದ ಯುಜಿಡಿ ಅಭಿಯಂತರ ರಕ್ಷಿತ್, ಆರಂಭ ದಲ್ಲಿ 48.14 ಕೋಟಿ ರೂ. ಇದ್ದ ಪುರಸಭೆ ಒಳಚರಂಡಿ ಯೋಜನೆಯು ಈಗ 55.6 ಕೋಟಿ ರೂ.ಗೆ. ವಿಸ್ತರಿಸಿದೆ. ಎಂದರು.

ಈಗಾಗಲೇ 24 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ವೆಟ್‌ವೆಲ್, ಎಸ್‌ಟಿಪಿ ಕಾಮಗಾರಿಗಳು ಬಾಕಿ ಇದೆ. ಪುರಸಭೆಯವರು ಸ್ಥಳ ಅವಕಾಶ ನೀಡಿದರೆ ಮುಂದಿನ ಎರಡು ವರ್ಷಗಳಲ್ಲಿ ಒಳಚರಂಡಿಯ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಈಗಾಗಲೇ ಪುರಸಭೆಯಿಂದ ಮೂರು ವೆಟ್‌ವೆಲ್‌ಗೆ ಜಾಗ ನೀಡಿದ್ದು, ಉಳಿದ ಎರಡು ವೆಟ್‌ವೆಲ್ ಕಾಮಗಾರಿಗೆ ಸಂಬಂಧಿಸಿದ ಜಾಗದ ಸಮಸ್ಯೆಯನ್ನು ಒಂದು ವಾರದೊಳಗೆ ಪರಿಹರಿಸಲಾಗುವುದು ಎಂದು ಹೇಳಿದರು.

ಮಾತಿನ ಚಕಮಕಿ: ಕುಂದಾಪುರ ಪ್ಲೇ ಓವರ್ ಕಾಮಗಾರಿಗೆ ಸಂಬಂಧಿಸಿದ ಚರ್ಚೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ವಿಷಯ ಪ್ರಸ್ತಾಪಿಸಿದ ಸದಸ್ಯ ಚಂದ್ರಶೇಖರ ಖಾರ್ವಿ, ಕುಂದಾಪುರ ಶಾಸ್ತ್ರಿ ಸರ್ಕಲ್ ಪ್ಲೇ ಓವರ್ ಕಾಮಗಾರಿ ನಿಧಾನಗತಿಗೆ ಶಾಸಕರು ಹಾಗೂ ಸಂಸದರೇ ನೇರ ಕಾರಣ ಎಂದು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಕಾಂಗ್ರೆಸ್ ಪಕ್ಷ ಅಧಿಕಾರಿದಲ್ಲಿದ್ದಾಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಆರಂಭವಾಗಿದ್ದು, ಅಂದು ಮೌನವಾಗಿದ್ದವರು ಇಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಹೆದ್ದಾರಿ ಕಾಮಗಾರಿಯು ಇಂದು ಶಾಸಕ, ಸಂಸದರು ಪ್ರಯತ್ನದಿಂದಾಗಿ ನಡೆಯುತ್ತಿದೆ. ಸುಮ್ಮನೆ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಸಂದೀಪ ಖಾರ್ವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News