ನೀವೀಗ ಮನೆಗೆ ಹೋಗಬೇಕು: ಟ್ರಂಪ್

Update: 2021-01-07 17:11 GMT

ವಾಶಿಂಗ್ಟನ್, ಜ. 7: ಅಮೆರಿಕದ ಸಂಸತ್ ಕಟ್ಟಡದಲ್ಲಿ ತನ್ನ ಬೆಂಬಲಿಗರು ನಡೆಸುತ್ತಿದ್ದ ದಾಂಧಲೆ ಮತ್ತು ದೊಂಬಿಯನ್ನು ಶ್ವೇತಭವನದ ತನ್ನ ಓವಲ್ ಕಚೇರಿಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಕ್ಷಿಸುತ್ತಿದ್ದರು. ಸಂಸತ್ ಕಟ್ಟಡದಲ್ಲಿ ಜನರ ಓಡಾಟವನ್ನು ನಿಷೇಧಿಸಿದ ಒಂದು ಗಂಟೆಯ ಬಳಿಕ, ‘‘ಪ್ರತಿಭಟನಕಾರರು ಶಾಂತಿಯುತವಾಗಿ ವರ್ತಿಸಬೇಕು’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದರು.

ಅಧ್ಯಕ್ಷರು ದೊಂಬಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಟೀಕೆ ಹರಡುತ್ತಿದ್ದಂತೆಯೇ, ಹೌಸ್ ರಿಪಬ್ಲಿಕನ್ ನಾಯಕ ಹಾಗೂ ಟ್ರಂಪ್ ಬೆಂಬಲಿಗ ಕೆವಿನ್ ಮೆಕಾರ್ಥಿ ಮತ್ತು ಶ್ವೇತಭವನದಲ್ಲಿರುವ ಟ್ರಂಪ್ ಸಲಹೆಗಾರರು, ದೊಂಬಿನಿರತರನ್ನು ಸಮಾಧಾನಪಡಿಸಲು ಟ್ರಂಪ್ ಇನ್ನೂ ಹೆಚ್ಚು ಮಾತಾಡಬೇಕು ಎಂದು ಹೇಳಿದರು.

ಟೆಲಿವಿಶನ್ ನೇರಪ್ರಸಾರದಲ್ಲಿ ಮಾತನಾಡಿದ ನಿಯೋಜಿತ ಅಧ್ಯಕ್ಷ ಜೋ ಬೈಡನ್, ‘‘ಇದು ಪ್ರತಿಭಟನೆಯಲ್ಲ, ಬಹಿರಂಗ ಬಂಡಾಯ’’ ಎಂದು ಬಣ್ಣಿಸಿದರು. ಈ ಮುತ್ತಿಗೆಯನ್ನು ಕೊನೆಗೊಳಿಸುವಂತೆ ಅವರು ಟ್ರಂಪ್‌ರನ್ನು ಒತ್ತಾಯಿಸಿದರು.

ಬಳಿಕ, ಟ್ರಂಪ್ ಟ್ವಿಟರ್‌ನಲ್ಲಿ ಮುದ್ರಿತ ವೀಡಿಯೊವೊಂದನ್ನು ಹಾಕಿದರು. ‘‘ನಿಮಗೆ ನೋವಾಗಿದೆ ಎನ್ನುವುದು ನನಗೆ ಗೊತ್ತು. ಚುನಾವಣೆಯನ್ನು ನಮ್ಮಿಂದ ಕದಿಯಲಾಗಿದೆ’’ ಎಂಬ ತನ್ನ ಹಳೆಯ ಸುಳ್ಳುಗಳನ್ನೇ ಅವರು ಅಲ್ಲಿ ಮತ್ತೆ ಹೇಳಿದರು. ‘‘ಆದರೆ, ಈಗ ನೀವು ಮನೆಗೆ ಹೋಗಬೇಕು. ನಮಗೆ ಶಾಂತಿ ಬೇಕು. ನಮಗೆ ಕಾನೂನು ಮತ್ತು ವ್ಯವಸ್ಥೆ ಬೇಕು’’ ಎಂದರು.

ಶ್ರೇಷ್ಠ ದೇಶಭಕ್ತರು

ಬಳಿಕ ಟ್ರಂಪ್ ಇನ್ನೊಂದು ಟ್ವೀಟ್ ಮಾಡಿ, ಗಲಭೆಕೋರರನ್ನು ‘ಶ್ರೇಷ್ಠ ದೇಶಭಕ್ತರು’ ಎಂಬುದಾಗಿ ಬಣ್ಣಿಸಿದರು. ‘‘ನಮ್ಮಿಂದ ದುಷ್ಟತನದಿಂದ ಕಸಿದುಕೊಂಡ ಚುನಾವಣಾ ವಿಜಯವೊಂದಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು’’ ಎಂದೂ ಅವರು ಹೇಳಿದರು.

ಭೂಗತ ಸುರಂಗ ಮಾರ್ಗದಲ್ಲಿ ಆಶ್ರಯ ಪಡೆದ ಸಂಸದರು

ಸಂಸತ್ ಕಟ್ಟಡ ‘ಕ್ಯಾಪಿಟಲ್’ನ ಒಳಗೆ ಮತ್ತು ಹೊರಗೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬಾಗಿಲುಗಳನ್ನು ಮುರಿಯುತ್ತಾ, ಕಿಟಿಕಿ ಗಾಜುಗಳನ್ನು ಒಡೆಯುತ್ತಾ ದಾಂಧಲೆಯಲ್ಲಿ ನಿರತರಾಗಿದ್ದಾಗ, ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರು ಒಳಗಿನ ಕೋಣೆಯೊಂದರಲ್ಲಿ ಆಶ್ರಯ ಪಡೆದರು.

ಆದರೆ, ಅದರ ಬಾಗಿಲುಗಳನ್ನೂ ಪ್ರತಿಭಟನಕಾರರು ಜೋರಾಗಿ ಬಡಿಯುತ್ತಿದ್ದಾಗ, ಆ ಕೋಣೆ ಸುರಕ್ಷಿತವೆಂದು ಸಂಸದರಿಗೆ ಅನಿಸಲಿಲ್ಲ. ಬಳಿಕ ಅವರನ್ನು ಸಂಸತ್ ಭವನದ ಭೂಗತ ಸುರಂಗ ಮಾರ್ಗಕ್ಕೆ ಕರೆದೊಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News