ಬಿಐಟಿ, ಕೆಆರ್‌ಇಡಿಎಲ್ ವತಿಯಿಂದ ʼರಾಷ್ಟ್ರೀಯ ಸಂಪನ್ಮೂಲ ಉಳಿತಾಯ ದಿನʼ ಕಾರ್ಯಕ್ರಮ

Update: 2021-01-07 17:42 GMT

ಮಂಗಳೂರು : ಬ್ಯಾರೀಸ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಹಾಗೂ ಕೆಆರ್‌ಇಡಿಎಲ್‌ (ಕರ್ನಾಟಕ ರಿನ್ಯೂವೇಬಲ್‌ ಎನರ್ಜಿ ಡೆವಲಪ್‌ ಮೆಂಟ್‌ ಲಿಮಿಟೆಡ್)‌ ಸಹಯೋಗದಲ್ಲಿ ʼರಾಷ್ಟ್ರೀಯ ಸಂಪನ್ಮೂಲ ಉಳಿತಾಯ ದಿನʼದ ಅಂಗವಾಗಿ ಒಂದು ದಿನದ ಸೆಮಿನಾರ್‌ ಇತ್ತಿಚೆಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ. ಮಹೇಂದ್ರ ಎಂ ದೋಣ್ಗಡಿ "ವಿಶ್ವದಾದ್ಯಂತ ಸಂಭವಿಸುತ್ತಿರುವ ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ ಹಾಗೂ ದೇಶಿಯ ಸಂಪನ್ಮೂಲಗಳನ್ನು ಉಳಿಸುವ ಕುರಿತು ರಾಷ್ಟ್ರೀಯ ಸಂಪನ್ಮೂಲ ಉಳಿತಾಯ ದಿನವು ಬೆಳಕು ಚೆಲ್ಲುತ್ತದೆ. ಜನಸಂಖ್ಯೆಯು ಹೆಚ್ಚಾಗುತ್ತಿರುವಂತೆ ಸಂಪನ್ಮೂಲಗಳ ಬಳಕೆ ಹಾಗೂ ಬೇಡಿಕೆ ಕೂಡಾ ಹೆಚ್ಚಾಗುತ್ತಿದೆ" ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು. ಬಿಐಟಿ ಪ್ರಾಂಶುಪಾಲರಾದ ಡಾ. ಮಂಜುರ್‌ ಭಾಷಾ ಸ್ವಾಗತ ಭಾಷಣದಲ್ಲಿ "ನಾವು ನಮ್ಮ ಸಂಪನ್ಮೂಲಗಳನ್ನು ಉಳಿಸಿಕೊಳ್ಳಬೇಕಾದರೆ ಮಾಡಬೇಕಾದ ಮೂಲಭೂತ ಕಾರ್ಯವೆಂದರೆ ಸಂಪನ್ಮೂಲಗಳ ಕುರಿತಾದಂತೆ ಪರಿಶೋಧನೆಗಳನ್ನು ನಡೆಸುವುದಾಗಿದೆ. ಸಂಪನ್ಮೂಲಗಳ ಬಳಕೆ ಮತ್ತು ಹರಿವಿನ ಕುರಿತಾದಂತೆ ಪರಿಶೋಧನೆಗಳನ್ನು ಮತ್ತು ಸಂಶೋಧನೆ ಗಳನ್ನು ನಡೆಸುವುದು ಹಾಗೂ ಮೇಲ್ಮೈಗೆ ಯಾವುದೇ ಋಣಾತ್ಮಕ ಪರಿಣಾಮಗಳಾಗದಂತೆ ಸಂಪನ್ಮೂಲಗಳ ಬಳಕೆಯನ್ನು ಮಿತಿಗೊಳಿಸುವ ಕುರಿತು ನಾವು ಆಲೋಚನೆ ನಡೆಸಬೇಕು" ಎಂದು ಹೇಳಿದರು.

ರಾಷ್ಟ್ರೀಯ ಸಂಪನ್ಮೂಲ ಉಳಿತಾಯ ದಿನದ ಅಂಗವಾಗಿ ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಭಾಷಣ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News